ವೈದೇಹಿ ಅವರ ‘ಕ್ರೌಂಚ ಪಕ್ಷಿಗಳು’ ಕಥಾ ಸಂಕಲನಕ್ಕೆ 2009ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕೇವಲ ಪುರುಷರ ಸೊತ್ತಾಗಿದ್ದ ಇಂಥ ಬಹುಮಾನಗಳು ಮಹಿಳಾ ಬರಹ [^]ಗಾರರಿಗೂ ಇತ್ತೀಚೆಗೆ ದೊರೆಯುತ್ತಿರುವುದು ಸಮಾಧಾನ. ವೈದೇಹಿ ಅವರು ವೈಯಕ್ತಿಕವಾಗಿ ನನಗೆ ಪರಿಚಯಸ್ಥರಲ್ಲ. ಸಾಹಿತ್ಯ ವಿದ್ಯಾರ್ಥಿಯಾದ ನಾನು ಅವರ ಎಲ್ಲ ಬರಹವನ್ನು ಓದಲಿಕ್ಕೆ ಆಗದಿದ್ದರೂ ಅಷ್ಟಿಷ್ಟು ಗಮನಿಸಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತ ಕಾರಣಕ್ಕೆ ಕುತೂಹಲದಿಂದ ‘ಕ್ರೌಂಚ ಪಕ್ಷಗಳು’ ಕೃತಿಯನ್ನು ಸಮಾಧಾನದಿಂದ ಓದಿದ್ದೇನೆ.
ಯಾವುದೇ ಒಂದು ಕೃತಿಗೆ ಇಂಥ ಬಹುಮಾನ ದೊರೆತಾಗ ಕೃತಿಯ ಹಾಗೂ ಕೃತಿಕಾರನ ವಿಜೃಂಭಣೆಯೇ ಜಾಸ್ತಿಯಾಗುವುದನ್ನು ಕಾಣುತ್ತೇವೆ. ‘ಗಂಭೀರ ಬರಹಗಾರರು’ ಎಂದು ಕರೆಯಿಸಿಕೊಂಡವರಲ್ಲಿಯೂ ಅನೇಕರು ಕೃತಿಯಲ್ಲಿ ಇದ್ದುದನ್ನು ಮತ್ತು ‘ಇಲ್ಲದನ್ನು’ ಸೇರಿಸಿಕೊಂಡು ಜಾಣತನದಿಂದ ಈ ಕೆಲಸ ನಿರ್ವಹಿಸಿ ತಮ್ಮ ಶಾಣ್ಯಾತನವನ್ನು ಪ್ರದರ್ಶಿಸುತ್ತಾರೆ. ಈ ‘ಶಾಣ್ಯಾತನ’ ವೈದೇಹಿ ಅವರ ಸಾಹಿತ್ಯದ ಹಿನ್ನಲೆಯಲ್ಲಿ ನಡೆದಿಲ್ಲ ಎಂದು ಹೇಳಲಾಗುವುದಿಲ್ಲ. ಅತಿರೇಕತೆಯ ಇದಾವುದನ್ನೂ ಇಲ್ಲಿ ಪ್ರಸ್ತಾಪಿಸಲು ಹೊರಟ್ಟಿಲ್ಲ ಅನ್ನೊ ಕಾರಣಕ್ಕಾಗಿ ಪ್ರಾರಂಭದಲ್ಲಿ ಒಂದೆರಡು ಮಾತುಗಳನ್ನು ಅನಿವಾರ್ಯವಾಗಿ ಉಲ್ಲೇಖಿಸಬೇಕೆನಿಸುತ್ತದೆ.
ಕೃತಿಯ ಬಗ್ಗೆಯಾಗಲಿ ಆಮೂಲಕ ಕೃತಿಕಾರರ ಕುರಿತಾಗಲಿ ಇಲ್ಲದ ರೀತಿಯಲ್ಲಿ ವಿಜೃಂಭಿಸುವುದರಿಂದ ಕೃತಿಗೂ ಮತ್ತು ಕೃತಿಕಾರನಿಗೂ ಅನ್ಯಾಯ ಮಾಡುವುದರ ಜೊತೆಗೆ ಲೇಖಕನ ಮುಂದಿನ ದಾರಿಯನ್ನೂ ತಪ್ಪಿಸಿ ಬಿಡಲಾಗುತ್ತದೆ. ಈ ಕಾರಣಕ್ಕಾಗಿ ಯಾವುದೇ ಪೂರ್ವಗ್ರಹ , ರಾಗದ್ವೇಷಗಳಿಗೆ, ಗುಂಪುಗಾರಿಕೆ , ಜಾತಿಯತೆ ಮೊದಲಾದ ‘ಆಧುನಿಕ ವಿಮರ್ಶಾ ಅರ್ಹತೆಗಳಿಗೆ’ ಒಳಗಾಗದೇ ವೈದೇಹಿ ಅವರ ‘ಕ್ರೌಂಚ ಪಕ್ಷಿಗಳು’ ಕೃತಿಯನ್ನು ಪರಿಚಯಿಸುವುದು ಈ ಪ್ರಬಂಧದ ಉದ್ದೇಶ. ಇಲ್ಲಿ ಪ್ರಸ್ತಾಪವಾದ ವಿಚಾರಗಳು ವೈಯಕ್ತಿಕವಾಗಿದ್ದು, ಅವುಗಳನ್ನು ಸ್ವೀಕರಿಸುವುದು ಬಿಡುವುದು ‘ಅವರವರ ಭಾವಕ್ಕೆ’ ಬಿಟ್ಟ ವಿಷಯ.
***
ಲಿಂಗತಾರತಮ್ಯ ಹಾಗೂ ಮಹಿಳಾ ಶೋಷಿತ ಮನೋವೃತ್ತಿಯನ್ನು ತಲೆಯಲ್ಲಿ ತುಂಬಿಕೊಂಡು ಅದನ್ನು ನಯವಾಗಿ ವಿರೋಧಿಸುವ ಧಾಟಿಯಲ್ಲಿ ಪುರುಷರ ಬುದ್ದಿಗೇಡಿ ಮಾನಸಿಕ ಸ್ಥಿತಿಯನ್ನು ಬಿಂಬಿಸುವ ಉದ್ದೇಶಿದಿಂದಲೇ ‘ದಾಳಿ’ ಕತೆಯನ್ನು ರಚಿಸಲಾಗಿದೆ. ತುಂಬಿದ ಬಸ್ಸಿನಲ್ಲಿ ‘ಸೀಟುಕೋಡುತ್ತೇನೆ’ ಎಂದು ಹೇಳಿ ಕಥಾ ನಾಯಕಿಯನ್ನು ಬಸ್ಸಿನಲ್ಲಿ ಉಳಿದ ಪ್ರಯಾಣಿಕರಂತೆ ಕಂಡಕ್ಟರ್ ಹತ್ತಿಸಿಕೊಳ್ಳುತ್ತಾನೆ. ಆದರೆ, ಕಂಡಕ್ಟರ್ಗಾಗಿ ಮೀಸಲಾದ ಸೀಟು ಖಾಲಿ ಇದ್ದರೂ ಆ ಮಹಿಳೆ ಕೇಳಿದರೂ ಆತ ಕೊಡದೆ ಹೊರಳಿ ಅತಿಯಾಗಿ ರೇಗಾಡುತ್ತಾನೆ. ಆ ಮೂಲಕ ತನ್ನ ಇಡೀ ದಿನದ ಒತ್ತಡದ ಜೀವನವನ್ನೇ ಆಕೆಯ ಮೇಲೆ ಆರೋಪಿಸಲು ಲಜ್ಜೆಗೆಟ್ಟು ಪ್ರಯತ್ನಿಸುತ್ತಾನೆ. ಆಕೆಯಾದರೂ ಕಂಡಕ್ಟರ್ನ ವರ್ತನೆಗೆ ಮಾತಿನ ಮೂಲಕ ಪ್ರತಿಕ್ರಿಯೇ ನೀಡದೇ ‘ಆತನ ಬುದ್ದಿಗೇಡಿತನ’ ಎನ್ನುವಂತೆ ಮುಗಳ ನಗೆಯ ಮೂಲಕವೇ ಸಹಿಸಿಕೊಳ್ಳುತ್ತಾಳೆ.
ಆತನ ರೇಗಾಟ ಮುಂದುವರೆದಂತೆ ನಾಯಕಿಯ ಮುಗುಳನಗೆಯೂ ಮುಂದುವರೆಯುತ್ತದೆ. ಕಂಡಕ್ಟರ್ ಟಿಕೆಟ್ಕ್ಕೆಂದು ಮುಂದೆ ಸರೆದಾಗ ಆತನ ಪರಿಚಯಸ್ಥ ಪ್ರಯಾಣಿಕನೊಬ್ಬ ಮೀಸಲು ಸೀಟಿನ ಮೇಲೆ ಸಲುಗೆಯಿಂದಲೇ ಕುಳಿತುಕೊಳ್ಳುತ್ತಾನೆ. ಹಾಗೆ ಕುಳಿತವನ ಬಗ್ಗೆ ಯಾವುದೇ ಮಾತುಗಳನ್ನಾಡದ ಇದೇ ಕಂಡಕ್ಟರ್ ಸಂತೋಷದಿಂದ ಆತನೊಂದಿಗೆ ಉಪಭಯಕುಶಲೋಪರಿಗೆ ಇಳಿಯುತ್ತಾನೆ. ಇದು ‘ದಾಳಿ’ ಕತೆಯ ವಸ್ತು. ಲೇಖಕಿ ಇಲ್ಲಿ ಬಹುಶಃ ಲಿಂಗತಾರತಮ್ಯ ನೀತಿ ಹಾಗೂ ಪುರುಷನ ದಾಳಿಯನ್ನು ಖಂಡಿಸುತ್ತಾರೆ ಎಂದೆನಿಸುತ್ತದೆ.
ಕಥೆಯಲ್ಲಿ ಹೇಳಿಕೊಳ್ಳುವ ಗಟ್ಟಿತನ ಹಾಗೂ ಸೈದ್ಧಾಂತಿಕ ಸ್ಪಷ್ಟ ತಿಳುವಳಿಕೆ ಇಲ್ಲದೆ ಕತೆ ಸಂಪೂರ್ಣವಾಗಿ ಸೊರಗಿ ಬತ್ತಿಯಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ಕಂಡಕ್ಟರ್ನ ಅತೀ ರೇಗಾಟ, ಅದಕ್ಕೆ ಆಕೆಯ ಮುಗುಳ ನಗೆಯ ಧಾರವಾಹಿ ಅವಾಸ್ತವ ಎನ್ನುವ ಮಟ್ಟದಲ್ಲಿ ಬಂದಿದೆ. ವಾಸ್ತವಾಗಿ ಕಂಡಕ್ಟರ್ ಈ ರೀತಿ ಮಾತನಾಡಲು ಸಾಧ್ಯವೇ ಇಲ್ಲ. ಆಕಸ್ಮಿಕವಾಗಿ ಅದು ಸತ್ಯವಾಗಿದ್ದರೂ ತುಂಬಾ ವಿರಳ ಎನ್ನಬಹುದು. ಇದನ್ನೇ ಸಾಮುದಾಯಕವಾಗಿ ಸಾರ್ವತ್ರಿಕಗೊಳಿಸುವುದು ಲೇಖಕಿಯ ತಿಳುವಳಿಕೆಯ ಮಿತಿಯನ್ನು ಬಿಂಬಿಸುತ್ತದೆ.
ಹವಾನಿಯಂತ್ರಿತ ಕಾರು,ಬಸ್, ರೈಲಿನಲ್ಲಿ ಸುತ್ತಾಡುವ ವೈದೇಹಿ ಅವರಿಗೆ ಈ ರೀತಿ ರಿಕ್ಕಾಗಿ ತುಂಬಿದ ಬಸ್ಸಿನಲ್ಲಿ ಓಡಾಡಿದ ಅನುಭವ ಇಲ್ಲ ಎಂಬುದನ್ನು ಕತೆ ಸ್ಪಷ್ಟವಾಗಿ ಹೇಳುತ್ತದೆ. ಯಾರೋ ಹೇಳಿದನ್ನು ಕೇಳಿ ಅತೀಯಾಗಿ ಕಲ್ಪಿಸಿಕೊಂಡು ಕತೆಯನ್ನು ಪೂರ್ವಗ್ರಹ ಪೀಡಿತದಿಂದ ಮನಸ್ಸಿಗೆ ತೋಚಿದಂತೆ ಬರೆಯಲಾಗಿದೆ. ಸರಿಯಾದ ಅನುಭವ ಇಲ್ಲದಿದ್ದರೆ ಸಾಹಿತ್ಯ ಹೇಗಾಗುತ್ತದೆ ಎನ್ನುವುದಕ್ಕೆ ವೈದೇಹಿ ಅವರ ‘ದಾಳಿ’ ನಿದರ್ಶನವಾಗುತ್ತದೆ.
ಲೇಖಕಿ ಬಿಂಬಿಸಿದಂತೆ ಕಂಡೆಕ್ಟರ್ ರೇಗಾಟ ಬಸ್ಸುಗಳಲ್ಲಿ ನಡೆಯುವುದಿಲ್ಲವೆಂದಲ್ಲ. ಆದರೆ, ಲೇಖಕಿ ಹೇಳಿದ ಸ್ವರೂಪದಲ್ಲಿ ನಡೆಯದೆ ಬೇರೆ ಸ್ವರೂಪದಲ್ಲಿ ನಡೆಯುತ್ತದೆ. ಅವರಿಗೆ ಅದು ಗೊತ್ತಿಲ್ಲ. ಹೀಗಾಗಿ ಯಾವುದೋ ಗುಂಗಿನಲ್ಲಿ ತಮಗೆ ತಿಳಿದಂತೆ ಬರೆಯುತ್ತ ಹೋಗುತ್ತಾರೆ. ಕಂಡಕ್ಟರ್ನ ಪರಿಚಯಸ್ಥರೊಬ್ಬರು ಆತನ ಸೀಟಿನ ಮೇಲೆ ಕುಳಿತಾಗ ‘ಎದ್ದೇಳಿ’ ಎಂದು ಹೇಳುವುದು ಸುಸಂಸ್ಕೃತ ಲಕ್ಷಣ ಅನ್ನಿಸುವುದಿಲ್ಲ. ಅದನ್ನೇ ದೊಡ್ಡದಾಗಿ ಬಿಂಬಿಸುವ ಅವಶ್ಯಕತೆಯೂ ಬರುವುದಿಲ. ಇದನ್ನೆ ಲಿಂಗತಾರಮ್ಯ ಎಂದು ಬಗೆಯುದರಲ್ಲಿ ಯಾವ ಅರ್ಥವೂ ಇಲ್ಲ. ಲೇಖಕಿ ಈ ಫಿಲಾಸಾಫಿಯನ್ನು ಮುಂದಿಟ್ಟುಕೊಂಡು ತುಂಬಾ ತ್ರಾಸು ತೆಗೆದುಕೊಂಡು ಗುದ್ದಾಡಿ ಕತೆ ಬರೆದಂತೆ ಭಾಸವಾಗುತ್ತದೆ. ಹೀಗಾಗಿ ‘ದಾಳಿ’ ತನ್ನ ಸಹಜತೆಯನ್ನು ಕಳೆದುಕೊಳ್ಳುತ್ತ, ಒಂದು ದೋಷಪೂರಿತ ಕತೆಯಾಗಿ ಉಳಿದುಕೊಳ್ಳುತ್ತದೆ.
‘ದಾಳಿ’ ಕತೆ ಓದುತ್ತಿದ್ದಂತೆ ಮೇಲಿನ ಈ ಭಾವನೆಗಳು ನನ್ನಲ್ಲಿ ಮೂಡಿದಾಗ ಅದನ್ನು ಪರೀಕ್ಷಿಸಲೆಂದು ಗೆಳೆಯರೊಬ್ಬರಿಗೆ ಈ ಕತೆಯನ್ನು ಓದಿ ಹೇಳಲು ಪ್ರಾರಂಭಿಸಿದೆ. ಎರಡನೇ ಪ್ಯಾರಾಗ್ರಾಫ್ ಓದಿ ಮೂರನೇ ಪ್ಯಾರಾ ಪ್ರವೇಶಿಸುತ್ತಿದ್ದಂತೆ ‘ದಯಮಾಡಿ ಸಾಕು ನಿಲ್ಲಿಸಿ, ಮುಂದೆ ಓದಬೇಡಿ, ಅದರಲ್ಲಿ ಏನೂ ಇಲ್ಲ, ಅಸಂಬದ್ಧವಾದ ಕತೆ’ ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದರು.
‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳಿಂದ ಕೂಡಿದ ಸಂಕಲನ. ‘ಮೊದಲನೆಯ ತುತ್ತಿಗೆ ಕಲ್ಲು’ ಎನ್ನುವ ಹಾಗೆ ಸಂಕಲನದ ಮೊದಲನೆಯ ಕತೆ ‘ದಾಳಿ’ ತುಂಬಾ ನಿರಾಶೆಯನ್ನುಂಟುಮಾಡಿತು. ಲೇಖಕಿಯ ಸೃಜನಶೀಲತೆ, ಅನುಭವ ಮತ್ತು ಸೈದ್ಧಾಂತಿಕ ಅಭಿವ್ಯಕ್ತಿಯ ಕೊರತೆಯನ್ನು ಮೊದಲ ಕತೆಯೇ ಬೇಡವೆಂದರೂ ಎತ್ತಿ ತೋರಿಸಿದೆ. ಅನ್ನ ಕುದ್ದಿರುವ ಬಗ್ಗೆ ಅರಿತುಕೊಳ್ಳಲು ‘ಒಂದಗಳು ಹಿಚುಕಿ ನೋಡಿದರೆ ಸಾಕು’ ಎನ್ನುವಂತೆ ‘ಮೊದಲನೆ ಕತೆ ಇಡೀ ಕಥಾ ಸಂಕಲನದ ಅಡುಗೆಯನ್ನು ತಿಳಿಯಪಡಿಸುತ್ತದೆ’ ಎಂಬ ಮಾತು ನೆನಪಿಗೆ ಬಂದರೂ ಮೊದಲನೆ ಕತೆಯ ಮೂಲಕವೇ ಸಂಕಲನದ ಇಡೀ ಕತೆಗಳು ನಿರಾಶಾದಾಯಕ ಎಂದು ಹೇಳಲಾಗುವುದಿಲ್ಲ. ಮೊದಲನೆಯ ಕತೆಯ ನಿರಾಶೆಯಿಂದ ಮುಂದಿನ ಕತೆಗಳ ಓದನ್ನು ಬಿಟ್ಟಿಲ್ಲ. ವೈದೇಹಿ ಅವರು ಎಷ್ಟು ತ್ರಾಸು ತೆಗೆದುಕೊಂಡು ಮೊದಲನೆಯ ಕತೆ ಹೆಣೆದಿದ್ದಾರೋ ಅದಕ್ಕಿಂತ ಹೆಚ್ಚು ತ್ರಾಸು ತೆಗೆದುಕೊಂಡು, ಮನಸ್ಸು ಗಟ್ಟಿ ಮಾಡಿ ಅಷ್ಟೂ ಕತೆಗಳನ್ನು ಓದಿ ಜಯಶಾಲಿಯಾದ ತೃಪ್ತಿ ಇದೆ. ಒಂದಿಷ್ಟು ಸಮಾಧಾನ ತರುವ, ಮತ್ತೊಂದಿಷ್ಟು ಖುಷಿ ಕೊಡುವ ಕತೆಗಳೂ ಇಲ್ಲಿವೆ.
ನಟಿ,ಸಬಿತಾ ಮಾತು ಸೋತ ಕ್ಷಣ, ಇತ್ಯಾದಿ
ತನ್ನ ಒಡಲಿನ ಉಡಿಯಲ್ಲಿ ನೋವು ತುಂಬಿಕೊಂಡು ಎಲ್ಲರನ್ನೂ ನಗಿಸುವ ವಿದೂಷಕಿಯೋರ್ವಳ ಹಾಸ್ಯಪ್ರವೃತ್ತಿಯನ್ನು ಬಿಂಬಿಸುವುದು ‘ನಟಿ’ ಎಂಬ ಕತೆ. ಬೇರೆಯವರ ಅನುಕರಣೆ ಮಾಡಿ ನಗೆಸುವ ಈಕೆಯಲ್ಲಿಯೂ ನೋವು ತುಂಬಿಕೊಂಡಿರುವ ಬಗ್ಗೆ ಕತೆಯ ಕೊನೆಯಲ್ಲಿ ಲೇಖಕಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಅಷ್ಟೊಂದು ನಗೆಸುವ ಆಕೆ ಕೊನೆಗೆ ಕೋಣೆಯನ್ನು ಪ್ರವೇಶಿಸಿ ಬಾಗಿಲು ಹಾಕಿಕೊಂಡು ಎಷ್ಟು ಕರೆದರೂ ಬರದೆ ಇರುವುದು ನಗಿಸಿ ಸುಸ್ತಾಗಿ ಮಲಗಿರುವಳೋ ಇಲ್ಲ ಸತ್ತಳೋ ಎಂಬುದು ಅರ್ಥವೇ ಆಗುವುದಿಲ್ಲ. ಆಕೆಯಲ್ಲಿ ಎಂಥ ಬಗೆಯ ನೋವು, ಯಾವ ಕಾರಣ ಎಂಬುದು ಕತೆಯಲ್ಲಿ ಸುಳಿವು ಸಿಗುವುದಿಲ್ಲ. ಹೀಗಾಗಿ ಕತೆ ದೋಷಪೂರಿತ ಅನ್ನಿಸದಿದ್ದರೂ ಅಂತ್ಯ ಅಷ್ಟು ಸಹಜವೆನಿಸುವುದಿಲ್ಲ.
‘ಸಬಿತಾ’ ಹೆಣ್ಣಿನ ವಿಚಿತ್ರ ಮನೋವೃತ್ತಿಯನ್ನು ಬಿಂಬಿಸುವ ಇನ್ನೊಂದು ಕತೆ. ತನ್ನ ಇರುವಿಕೆಯ ಬಗ್ಗೆ ಹಳಿಯುತ್ತ ಎದುರು ಮನೆಯ ಶ್ರೀಮಂತಿಕೆ ಹಾಗೂ ಅವರ ವರ್ತನೆಯ ಬಗ್ಗೆಯೇ ಚಿಂತಿಸುವ ಮನೋವೃತ್ತಿಯನ್ನು ಈ ಕತೆಯಲ್ಲಿ ತಂದುಕೊಳ್ಳಲಾಗಿದೆ. ಇಂಥ ಸ್ವಭಾವ ಹೊಂದಿದ ‘ಸಬಿತಾ’ ಒಂದು ದಿನದ ಮಟ್ಟಿಗೆ ಮನೆಗೆ ಬಂದ ಗೆಳತಿಗೆ ಆ ಬಗ್ಗೆ ನಿರಂತರ ಪ್ರಸ್ತಾಪಿಸಿ ಆಕೆ ಮರುದಿನ ಓಡಿ ಹೋಗುವ ಮಟ್ಟದವರೆಗೆ ವರ್ತಿಸುತ್ತಾಳೆ. ಇದು ಲಘು ಹಾಸ್ಯ ಪ್ರಾಧಾನ್ಯದ ಒಂದು ಸಾಮಾನ್ಯ ಕತೆ ಎಂದು ಹೇಳಬಹುದು.
‘ಮಾತು ಸೋತ ಕ್ಷಣ’ ಇನ್ನೊಂದು ಕತೆ. ಮಹಿಳೆಯೋರ್ವಳ ಸಾವಿಗೀಡಾದ ಸೂತಕದ ಮನೆಗೆ ಆಗಮಿಸಿದ ವೃದ್ಧನೋರ್ವ ಯಾವುದೇ ಮಾತುಗಳನ್ನಾಡದೇ ಆತನಲ್ಲಿ ಉಮ್ಮಳಿಸಿ ಬಂದ ದುಃಖದ ಸಂದರ್ಭ ಕತೆಯ ವಸ್ತು. ‘ನಟಿ’ ಕತೆಯ ಧಾಟಿಯಂತೆಯೇ, ಮೌನವೇದನೆ ಅನುಭವಿಸುವ ವೃದ್ಧನಿಗೆ ಸತ್ತವಳು ಯಾವು ಸಂಬಂಧ ಹೊಂದಿದ್ದಳು ಎಂಬುದನ್ನು ಲೇಖಕಿ ಎಲ್ಲಿಯೂ ಪ್ರಸ್ತಾಪಿಸದಿದ್ದರೂ ಆಕೆಯ ಸಾವಿನಿಂದ ಆತ ಮಾತುಹೊರಡದ ಮೌನವೇದನೆ ಅನುಭವಿಸಲು ಕಾರಣವೇನು ಅಂಬುವುದನ್ನೂ ಹೇಳುವುದಿಲ್ಲ. ಹೀಗಾಗಿ ಕತೆ ತಡಬುಡವಿಲ್ಲದಂತಾಗುತ್ತದೆ. ವೈದೇಹಿ ಅವರ ಈ ತಂತ್ರ - ಯಾವುದೋ ಪ್ರಾಣಿವೊಂದನ್ನು ಕಂಬಳಿಯಲ್ಲಿ ಮುಚ್ಚಿಟ್ಟು ‘ಇದರಲ್ಲಿ ಮನುಷ್ಯನೇ ಇದ್ದಾನೆ, ಯಾರು ಅನ್ನುವುದನ್ನು ಗುರುತಿಸಿ’ ಎಂದು ಸೂಚಿಸಿದಂತಾಗಿದೆ.
ಆಧುನಿಕ ಬದುಕಿನ ಪ್ರವೇಶದ ತರಾತುರಿ ಮತ್ತು ಇದರಿಂದಾಗಿ ತಳಮಳಿಸುವ ಸಾಂಪ್ರದಾಯಿಕ ಬದುಕಿನ ಸ್ಥಿತಿಯನ್ನು ಸಂಕೇತಿಸುವ ಕತೆ ‘ಮನೆಯವರೆಗಿನ ಹಾದಿ’. ಎರಡೂ ಬದಕನ್ನು ಮುಖಾಮುಖಿಗೊಳಿಸುವ ಈ ಕತೆ ಒಂದಿಷ್ಟು ಸಮಾಧಾನ ನೀಡಿದರೂ ಈ ಕಥಾ ವಸ್ತುವನ್ನು ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯತೆ ಇದ್ದರೂ ಲೇಖಕಿಗೆ ಬಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ವೈದೇಹಿಯವರು ಒಂದಿಷ್ಟು ಧೈರ್ಯದಿಂದ ಬರೆದ ಇನ್ನೊಂದು ಕತೆ ‘ಪ್ರಶ್ನೆ’. ತುಂಬಿದ ಸಭೆಯಲ್ಲಿ ಸಾಹಿತ್ಯಿಕವಾಗಿ ಮಾತನಾಡುವ ವಿದ್ವತ್ವುಳ್ಳ ಐವತ್ತರ ಇಳಿ ವಯಸ್ಸಿನವನೊಂದಿಗೆ ಹೆಣ್ಣೊಂದು ಒಂದು ರಾತ್ರಿ ಕಳೆಯಲು ತೆರಳುವ ಸುತ್ತ ಹೆಣೆಯಲಾಗಿದೆ. ವಿದ್ವಾಂಸನ ಇಡೀ ವ್ಯಕ್ತಿತ್ವಕ್ಕೆ ಮರುಳಾದ ಸಭೆಯೊಳಗಿದ್ದ ಭುವಿ ಅವನೊಂದಿಗೆ ಒಂದು ರಾತ್ರಿ ಅಥವಾ ರಾತ್ರಿಯ ಒಂದು ತಾಸು ಕಳೆಯಲು ಬಯಸುತ್ತಾಳೆ. ತನ್ನ ಈ ಮನೋ ಇಂಗಿತವನ್ನು ಮಗ್ಗುಲಲ್ಲಿಯೇ ಇದ್ದ ಗೆಳತಿ ಅನು ಮುಂದೆ ಪ್ರಸ್ತಾಪಿಸುತ್ತಾಳೆ. ಪ್ರಾರಂಭದಲ್ಲಿ ಅನು ಈ ಅನೈತಿಕ ಮನೋಸ್ಥಿತಿಯನ್ನು ವಿರೋಧಿಸಿದರೂ ನಂತರ ಅದಕ್ಕೆ ಪ್ರೋತ್ಸಾಹಿಸುತ್ತಾಳೆ.
ಸಭೆಯಲ್ಲಿ ಸಂವಾದ ನಡೆದಾಗ ಈ ಬಗ್ಗೆ ಪ್ರಶ್ನೆ ಕೇಳಲು ಉತ್ತೇಜಿಸುತ್ತಾಳೆ. ಕಡೆಗೆ ಅನು ಭುವಿಯಿಂದ ಪ್ರಶ್ನೆ ಬರೆಯಿಸಿ ತಾನೇ ಚೀಟಿ ಸಾಗಿಸುತ್ತಾಳೆ. ಕೊನೆಯ ಪ್ರಶ್ನೆಯಾಗಿ ಎತ್ತಿಕೊಳ್ಳುವ ವಿದ್ವಾಂಸ ಪ್ರಶ್ನೆ ಬರೆದವರಿಗೆ ತುಂಬಿದ ಸಭೆಯಲ್ಲಿ ಎದ್ದು ನಿಲ್ಲಲು ಸೂಚಿಸುತ್ತಾನೆ. ಎದ್ದು ನಿಲ್ಲಲು ಅನು ಎಷ್ಟೇ ಉತ್ತೇಜಿಸಿದರೂ ತನ್ನ ಅಚಾತುರ್ಯದಿಂದ ನಡುಗುತಿದ್ದ ಭುವಿ ಕುಸಿದುಹೋಗುತ್ತಾಳೆ. ವಿದ್ವಾಂಸ ಸಭೆಯ ನಂತರ ಸಂದರ್ಶಿಸಲು ಸೂಚಿಸುತ್ತಾನೆ. ಸಭೆಯ ನಂತರವೂ ಅವನನ್ನು ಕೇಳಲು ಅನು ಭುವಿಗೆ ಒತ್ತಾಯಿಸುತ್ತಾಳೆ. ಕಡೆಗೆ ಭುವಿ ಮಾಡದ ಧೈಯವನ್ನು ಅನು ಮಾಡುತ್ತಾಳೆ; ಭುವಿ ಕೇಳಿದ ಪ್ರಶ್ನೆಗೆ ಅನು ಉತ್ತರ ಪಡೆದುಕೊಳ್ಳಲು ಆತನೊಂದಿಗೆ ರಾತ್ರಿ ಕಳೆಯಲು ತೆರಳುತ್ತಾಳೆ.
ಆದರೆ, ಅವನೊಂದಿಗೆ ಒಂದು ರಾತ್ರಿ ಕಳೆಯಲು ಸಾಧ್ಯವಾಗದಿದ್ದರೂ ಅದೇ ರಾತ್ರಿಯ ಒಂದು ತಾಸನ್ನಾದರೂ ಕಳೆಯಬೇಕೆಂದು ಬಯಸಿ ಧೈರ್ಯವಾಗಿ ಪ್ರಶ್ನೆ ಕೇಳಲು ಮುಂದಾಗುವ ಭುವಿ ಅವನೊಂದಿಗೆ ಪ್ರಾಯೋಗಿಕತೆಗೆ ಹಿಂದೆಟುಹಾಕುವುದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗುತ್ತದೆ. ಅಡ್ಡಿಯಿಲ್ಲ ಒಳ್ಳೆ ಕತೆ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಇಂಥ ಒಂದು ರಾತ್ರಿಗಾಗಿಯೇ ಸಭೆ ಸಮಾರಂಭಗಳು ನಡೆಯುವ, ಅದನ್ನೇ ಉಪಯೋಗಿಸಿಕೊಳ್ಳುವ ಹೆಣ್ಣಿನ ಮನೋಸ್ಥಿತಿಯನ್ನು ಬಿಂಬಿಸುವಲ್ಲಿ ಗಮನ ಸೆಳೆಯುತ್ತದೆ. ತಮ್ಮ ಕೆಲ ಸಾಹಿತ್ಯ ಸಾಂಸ್ಕೃತಿಕ ಸಮಾರಂಭಗಳಿಗೆ ಬರೆದ ವ್ಯಾಖ್ಯಾನದಂತಾಗಿದೆ.
ವೈದೇಹಿಯವರು, ‘ಸಜ್ಜನ’ ಎನಿಸಿಕೊಳ್ಳುವ ವ್ಯಕ್ತಿತ್ವದೊಳಗಿನ ಇನ್ನೊಂದು ‘ಮುಖ’ವನ್ನು ದರ್ಶಿಸುವ ಮನೋವೈಜ್ಞಾನಿಕತೆ ವಿಶಿಷ್ಟವಾದದ್ದು. ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ನಡುವೆ ಇಟ್ಟುಕೊಳ್ಳುವ ಅಂತರವನ್ನು ವೈದೇಹಿ ಅವರು ಬಟಾಬಯಲುಗೊಳಿಸುವ ರೀತಿ ಗಮನಸೆಳೆಯುತ್ತದೆ. ಇದು ‘ಪ್ರಶ್ನೆ’ ಕತೆಯಲ್ಲಿ ಅನುಸರಿಸಿರುವಂತೆ ‘ಒಗಟು’ ಹಾಗೂ ‘ಮಾತು ಸೋತ ಕ್ಷಣ’ ಕತೆಗಳಲ್ಲಿಯೂ ತಂದುಕೊಳ್ಳುತ್ತಾರೆ. ಆದರೆ, ಆ ಮಾನಸಿಕ ತುಮಲಗಳ ಹಿಂದೆ ಇರುವ ಕಾರಣದ ಪೂರಕತೆಯನ್ನು ಲೇಖಕಿ ಒದಗಿಸುವಲ್ಲಿ ಹಿಂದೇಟು ಹಾಕುವುದರಿಂದ ಕತೆಗಳು ಸಡಿಲಿಕೆ ಅನುಭವಿಸುತ್ತವೆ.
‘ಒಗಟು’ದೊಳಗಿನ ಶೋಭಾ ಅಂಟಿ ಮನೆಬಿಟ್ಟು ಎಂದೂ ಹೊರಗೆ ಬರದೆ ಇದ್ದವಳು ಒಂದು ಸಲ ಸಂಬಂಧಿಕರ ಮನೆಗೆ ಬಂದರೂ ಅವರ ಮನೆಯಲ್ಲಿ ಉಳಿದುಕೊಳ್ಳದೇ ಇಡೀ ದಿನ ಹೊರಗೆ ಹೋಗಿ ಸಂಜೆ ಮತ್ತೇ ಮನೆಗೆ ಬಂದು ಅದೇ ರಾತ್ರ್ರಿ ಗಂಡನ ಮನೆಗೆ ತೆರಳುತ್ತಾಳೆ. ಶೋಭಾ ಅಂಟಿ ಇಡೀ ದಿನ ಎಲ್ಲಿಗೆ? ಯಾವ ಕಾರಣಕ್ಕೆ ಇಷ್ಟೋತ್ತು ಹೋದಳು? ಎಂಬ ಪ್ರಶ್ನೆಗಳಿಗೆ ಕತೆಯಲ್ಲಿ ನೇರವಾಗಿ ಉತ್ತರ ಕೊಡದಿದ್ದರೂ ಮನೆಯಾಕಿ ಅಂಟಿ ಬಟ್ಟೆಯನ್ನು ಮೂಸಿ ನೋಡುವಲ್ಲಿ ಲೇಖಕಿ ಒಗಟನ್ನು ಬಿಡಿಸುತ್ತಾರೆ. ‘ಪ್ರಶ್ನೆ’ ಹಾಗೂ ‘ಒಗಟು’ ಎರಡೂ ಕತೆಗಳನ್ನು ಒಂದುಸಲ ಓದಿ ಖುಷಿ ಪಡಲು ಅಭ್ಯಂತರವಿಲ್ಲ.
ಇನ್ನೊಂದು ರೀತಿಯಲ್ಲಿ ಖುಷಿ ಕೊಡುವ ಕತೆ ‘ಅವರವರ ಭಾವಕ್ಕೆ’. ಬಾಡಿಗೆ ಮನೆಯ ದೇವರನ್ನು ಪ್ರತಿಷ್ಟಾಪಿಸುವ ಜಗುಲಿಯ ಮೇಲೆ ಬೇರೆ ಬೇರೆ ಬಾಡಗೆದಾರರು ಬೇರೆ ಬೇರೆ ದೇವರನ್ನು ಪೂಜಿಸುವ ಮೂಲಕ ತಮ್ಮ ಮತ ಧರ್ಮವನ್ನು ಸಾಬೀತು ಪಡೆಸುವಂತೆ, ಅದೇ ಸ್ಥಳದಲ್ಲಿ ಇನೊಂದು ಕುಟುಂಬ ಮಧ್ಯದ ಬಾಟಲಿಗಳನ್ನು ಇಡುವುದರ ಮೂಲಕ ತಮ್ಮ ಸಂಸ್ಕೃತಿಯನ್ನು ತೋರ್ಪಡಿಸುತ್ತಾರೆ. ಕೊನೆಗೆ ಮತ್ತೊಂದು ಕುಟುಂಬ ಅದೇ ಸ್ಥಳದಲ್ಲಿ ಮಗುವನ್ನು ಕುಳ್ಳಿರಿಸಿ ಸಂತೋಷ ಪಡುವ ವೈಚಾರಿಕತೆಯನ್ನು ಲೇಖಕಿ ಬಿಂಬಿಸಿದ್ದಾರೆ. ಕತೆ ಪರವಾಗಿಲ್ಲ.
‘ತೆರೆಯದ ಪುಟಗಳು’ ಕತೆಯಲ್ಲಿ ಹೆಣ್ಣಿನ ಲೈಂಗಿಕ ಬಯಕೆಯ ಹತಾಶಯ ಹಾಗೂ ಗಂಡಸಿನ ಶಂಡತನ ಸಾಂಕೇತಿಕವಾಗಿ ಧ್ವನಿತಗೊಂಡಿದೆ. ಹಾಗೆಯೇ ಕೃತಿಯ ತಲೆಬರಹ [^]ವನ್ನು ಹೊತ್ತಿರುವ ‘ಕ್ರೌಂಚ ಪಕ್ಷಿಗಳ’ ಕತೆಯಲ್ಲಿ ಅಶಯ ಚನ್ನಾಗಿದ್ದರೂ ತುಂಬಾ ಗೊಂದಲ ಸೃಷ್ಟಿಸಿ, ಒಂದು ಬಗೆಯಲ್ಲಿ ಅಸಂಬದ್ಧ ಸನ್ನಿವೇಶಗಳನ್ನು ಒತ್ತಾಯಪೂರ್ವಕವಾಗಿ ತಂದು ಹಾಕಿ ಓದುಗರಿಂದ ಕತೆಯನ್ನು ದೂರು ಸರಿಸುತ್ತಾರೆ.
‘ಕ್ರೌಂಚ ಪಕ್ಷಿಗಳು’ ಕೃತಿಯನ್ನು ಹೇಗೆ ಇದೆಯೋ ಹಾಗೆಯೇ ಮುಕ್ತ ಮನಸ್ಸಿನಿಂದ (ಮಾನಸಿಕ ದೂರು) ಓದಿದರೆ ಲೇಖಕಿಯ ಸೃಜಶೀಲತೆ, ಅನುಭವ ಮತ್ತು ಅಭಿವ್ಯಕ್ತಿಯ ನಿಜವಾದ ಗಟ್ಟಿತನ ಗೊತ್ತಾಗುತ್ತದೆ. ಅದನ್ನು ಬಿಟ್ಟು ಮೊದಲೇ ಕೃತಿ ಮತ್ತು ಕೃತಿಕಾರರ ಬಗ್ಗೆ ಇಲ್ಲಸಲ್ಲದನ್ನು ತಲೆಯಲ್ಲಿ ಚನ್ನಾಗಿ ತುಂಬಿಕೊಂಡು ಓದುತ್ತ ಹೋದರೆ ಒಂದು ಸಾಮಾನ್ಯತೆಯನ್ನು ಅಸಾಮಾನ್ಯ ಮಟ್ಟಕ್ಕೆ ಏರಿಸಿ ಕೆಟ್ಟ ಮನಸ್ಥಿತಿಯನ್ನು ಪ್ರದರ್ಶಿಸುವಂತೆ, ಅಸಮಾನ್ಯವಾದುದ್ದನ್ನು ಸಾಮಾನ್ಯ ಮಟ್ಟಕ್ಕೆ ಇಳಿಸಿ ಕೊಳಕು ಮನಸ್ಸನ್ನು ತೋರ್ಪಡಿಸಿ ದುರಂತಕ್ಕೆ ಕಾರಣವಾಗಬಹುದಾಗಿದೆ.
ವೈದೇಹಿ ಅವರ ಮೇಲೆ ಮಧ್ಯಮ ವರ್ಗದ ಬದುಕಿನ ಮಾನಸಿಕ ಸ್ಥಿತಿ ಪ್ರಭಾವ ಬೀರಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಈ ವರ್ಗದ ಪಾತ್ರಗಳು, ಸನ್ನಿವೇಶ, ಸಂದರ್ಭಗಳು ಎಲ್ಲ ಕತೆಗಳಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತವೆ. ವೈದೇಹಿ ಅವರ ಸ್ತ್ರೀ ಪಾತ್ರಗಳು ‘ನನಗೂ ಶ್ರೀಮಂತ ಗಂಡ ಇದ್ದಿದ್ದರೆ?’ ಎಂದು ಭಾವಿಸುತ್ತ ಮಧ್ಯಮ ವರ್ಗದಿಂದ ಶ್ರೀಮಂತ ವರ್ಗಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತವೆ.
ಇಲ್ಲಿಯ ಒಂದೆರಡು ಕತೆಗಳು ದೋಷಪೂರಿತ, ಅಸಂಬದ್ಧ ಕತೆಗಳು ಎನಿಸುವಂತೆ ಎರಡ್ಮೂರು ಕತೆಗಳು ಜೊಳ್ಳ ಜೊಳ್ಳ ಎನಿಸಿದರೂ ಕೆಲ ಕತೆಗಳು ಸಮಾಧಾನ, ಖುಷಿ ನೀಡುತ್ತವೆ. ಆದರೆ, ಯಾವ ಕತೆಯೂ ಓದುಗನನ್ನು ಗಟ್ಟಿಯಾಗಿ ತಡೆದು ನಿಲ್ಲಿಸಿ ಸಂವಾದಿಸುವುದಿಲ್ಲ. ಮತ್ತೇ ಮತ್ತೇ ಓದಬೇಕೆನ್ನುವ ಗಟ್ಟಿ ಅನುಭವಗಳು ತೀರ ಕಡಿಮೆ ಎನ್ನುವುದರಲ್ಲಿ ಸಂಶಯವಿಲ್ಲ. ವೈದೇಹಿ ಅವರು ಯಾವುದೇ ವರ್ಗದ ಬದುಕಿನ ಬಗ್ಗೆ ಚಿತ್ರಿಸಿದರೂ ಯಾವುದೋ ಒಂದು ವಾದದ ಗುಂಗಿನಲ್ಲಿ ವಾಸ್ತವದಿಂದ ದೂರ ಉಳಿದು, ಕಲ್ಪನಾಲೋಕದಲ್ಲಿಯೇ ವಿಹರಿಸುತ್ತಾರೆ.
ಅಪವಾದ ಎನ್ನುವಂತೆ ಒಂದೆರೆಡು ಕತೆಗಳು ವಾಸ್ತವವನ್ನು ಮುಟ್ಟಿ ಮತ್ತೇ ದೂರ ಸರಿದು ನಿಲ್ಲುತ್ತವೆ. ಪಾಪ! ಇವರ ಕತೆಗಳಲ್ಲಿ ಕೆಳ ವರ್ಗದ ಮಹಿಳೆಗಂತೂ ಸಂಪೂರ್ಣವಾಗಿ ನಿಷೇಧವಿದೆ. ಇಂದಿಗೂ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಕಾಣದೆ ಭಾರತದಲ್ಲಿ ನಿಜವಾದ ಶೋಷಣೆಗೆ ಒಳಗಾದ ಮಹಿಳೆ ಆಧುನಿಕ ಬಹುತೇಕ ಮಹಿಳಾ ಬರಹಗಾರರ ಸಾಹಿತ್ಯದಲ್ಲಿ ಜಾಗ ಪಡೆದುಕೊಳ್ಳದೇ ಇರುವುದು ಸ್ತ್ರೀ ಸಾಹಿತ್ಯದ ಹೆಚ್ಚುಗಾರಿಕೆಯೋ ದುರಂತವೊ ಗೊತ್ತಿಲ್ಲ.
ಭಾರತದಲ್ಲಿ ದಲಿತರೊಂದಿಗೆ ಮಹಿಳೆಯೂ ಇತಿಹಾಸದ ಉದ್ದಕ್ಕೂ ಶೋಷಣೆಗೆ ಒಳಗಾಗಿದ್ದಾಳೆ. ಇಂಥ ಮಹಿಳಾ ಸಮುದಾಯದಿಂದ ಬಂದ ಇಂದಿನ ಅನೇಕ ಮಹಿಳಾ ಬರಹಗಾರರಿಗೆ ಮಧ್ಯಮ ಮತ್ತು ಶ್ರೀಮಂತ ವರ್ಗದ ಮಹಿಳೆಯರ ಉಡುವ, ತಿನ್ನುವ, ಒಬ್ಬನನ್ನು ಬಿಟ್ಟು ಮತ್ತೊಬ್ಬನ ಬೆನ್ನಟ್ಟಿ ಓಡಿಹೋಗುವ ಸಮಸ್ಯೆಗಳೇ ಮುಖ್ಯ ಸಮಸ್ಯೆಗಳಾಗಿ ಕಾಡುತ್ತವೆ. ತಮ್ಮಂತೆಯೇ ಮಹಿಳೆಯೊಬ್ಬಳು ತಮ್ಮ ಕೆಳಗೆ ಇದ್ದಾಳೆ ಎಂಬುದೇ ಕಾಣಿಸುವುದಿಲ್ಲ.
ಆಕಸ್ಮಿಕಾಗಿ ಕಂಡರೂ ಅದು ನೆಪ ಮಾತ್ರ. ಏನಿದ್ದರೂ ಇವರ ಸ್ವಾತಂತ್ರ್ಯ, ಸಮಾನತೆ ಎನ್ನುವುದು ತಾವು ಹೊರಡುವ ಬಸ್ಸಿನಲ್ಲಿನ ಸೀಟುಪಡೆದುಕೊಳ್ಳುವಲ್ಲಿ ಮಾತ್ರ ಸೀಮಿತವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಒಂದು ವರ್ಗದ ಮಹಿಳೆಯರು ಸ್ವಾತಂತ್ರ್ಯ , ಸಮಾನತೆಯ ದೃಷ್ಟಿಯಿಂದ ಯಾವ ಹೇಸಿಗೆಯ ಮಟ್ಟ ಮುಟ್ಟಿದ್ದಾರೆ ಎಂಬುದು ಇವರಿಗೆ ಮಹತ್ವದಾಗುವುದಿಲ್ಲ. ಕೆಲವರು ಅದೇ ನಿಜವಾದ ಮಹಿಳಾ ಸ್ವಾತಂತ್ರ್ಯ, ಸಮಾನತೆ ಎಂದು ಬಿಂಬಿಸುವರೂ ಇದ್ದಾರೆ. ‘ಕ್ರೌಂಚ ಪಕ್ಷಿಗಳು’ ಈ ದೃಷ್ಟಿಯಿಂದ ಸಂಪೂರ್ಣವಾಗಿ ಹೊರತಾಗಿದೆ ಎಂದು ಹೇಳಿದರೆ ತಪ್ಪಾಗುತ್ತದೆ.
ಕತೆ ತನ್ನ ಗಟ್ಟಿತನದೊಂದಿಗೆ ಪರಿಣಾಮಕಾರಿಯಾಗಬೇಕಾದರೆ, ಅದು ತನ್ನ ಕಲಾತ್ಮಕತೆಯೊಂದಿಗೆ ವಾಸ್ತವತೆಯನ್ನು ತನ್ನ ಹೃದಯ ಸ್ಥಾನವನ್ನಾಗಿರಿಸಿಕೊಳ್ಳಬೇಕಾಗುತ್ತದೆ. ಯಾವುದೋ ಒಂದು ವಾದಕ್ಕೆ ಗಂಟುಬಿದ್ದು, ಅದಕ್ಕೆ ಪೂರಕವಾದ ಸಂದರ್ಭ, ಸನ್ನಿವೇಶ, ಪಾತ್ರಗಳನ್ನು ತೀರ ಕಾಲ್ಪನಿಕವಾದ ರೀತಿಯಲ್ಲಿ ಚಿತ್ರಿಸುತ್ತ ಹೋದಂತೆ ಕತೆಗಳು ಸಹಜವಾಗಿ ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತವೆ. ಇದು ವೈದೇಹಿ ಅವರ ಕತೆಗಳಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ಕತೆಗಳು ಯಾವ ಕಾರಣಕ್ಕೂ ಹೆಚ್ಚು ಕಾಡುವುದೇ ಇಲ್ಲ. ಸಾಮಾನ್ಯವಾದ ಪರಿಣಾಮದ ಮೂಲಕ ಮನಸ್ಸಿನ ಪಟಲದ ಮೇಲೆ ತಾತ್ಕಾಲಿಕ ಪರಿಣಾಮ ಬೀರಿ ಮೋಡದಂತೆ ಮರೆಯಾಗುತ್ತವೆ.
ಒಂದು ಹೂವಿನ ಹಾರ ನಿರ್ಮಾಣಗೊಳ್ಳಬೇಕಾದರೆ, ಅದರೊಳಗೆ ‘ದಾರ’ ಬೇಕೇ ಬೇಕಾಗುತ್ತದೆ. ಆದರೆ, ‘ದಾರವೇ ಹಾರಾಗುವುದಿಲ್ಲ; ದಾರವಿಲ್ಲದೆ ಹಾರಕ್ಕೆ ಅಸ್ತಿತ್ವವೇ ಇಲ್ಲ.’ ಸುಮ್ಮನೆ ಹೂವುಗಳನ್ನು ನೆಲದ ಮೇಲೆ ಹಾರದಾಕಾರದಲ್ಲಿ ಜೋಡಿಸಿಟ್ಟ ಮಾತ್ರಕ್ಕೆ ಹಾರ ಅನ್ನಿಸಿಕೊಳ್ಳುವುದಿಲ್ಲ. ಹಾಗೆ ಜೋಡಿಸಿಟ್ಟ ಹೂವುಗಳಲ್ಲಿ ಯಾವುದಾದರೂ ಒಂದು ಹೂವು ತನ್ನ ಜಾಗಾ ಬಿಟ್ಟರೆ ಹಾರಿನ ಇಡೀ ಆಕಾರವೇ ಕಳೆದುಹೋಗುತ್ತದೆ. ಸೈದ್ಧಾಂತಿಕತೆ, ತಾತ್ವಿಕತೆ ಅನ್ನವುದು ಹಾರದೊಳಗಿನ ದಾರವಾಗಿ ಕಾರ್ಯನಿರ್ವಹಿಸುತ್ತದೆ. ಗಟ್ಟಿ ದಾರ ಬಳಸಿಕೊಂಡು ವೈವಿದ್ಯಮಯ ಹೂವುಗಳನ್ನು ಜೋಡಿಸಿಡುವುದು ಕಲೆಗಾರನ ಪ್ರತಿಭೆಗೆ ಸವಾಲಾಗುತ್ತದೆ. }
ಆದರೆ, ಹಾರವನ್ನು ಸಿದ್ದಪಡೆಸಬೇಕಾದರೆ ಹೂವು, ದಾರ ಮತ್ತು ಸೂಜಿ ಬೇಕೇ ಬೇಕಾಗುತ್ತೆದೆ. ವೈದೇಹಿ ಅವರ ಹತ್ತಿರ ಈ ಮೂರೂ ಇವೆ. ಆದರೆ, ಹಾರವನ್ನಾಗಿಸುವ ಕಲೆಗಾರಿಕೆ ಅಷ್ಟೊಂದು ಕೈಗೂಡಿಲ್ಲ. ಮೊದಲನೆಯದು, ಸರಿಯಾದ ಹೂವುಗಳ ಆಯ್ಕೆಯಾಗಿಲ್ಲ; ಹೂವೆಂದು ಭಾವಿಸಿ ಎಲೆಗಳನ್ನೇ ಹೆಚ್ಚು ಹರೆದುಕೊಂಡಿದ್ದಾರೆ. ಸೂಜಿಯಲ್ಲಿ ದಾರ ಸಿಕ್ಕಿಸಿ, ಬೇಕಾದ ಹೂವುಗಳು ಸಿಗದೇ ಇದ್ದಾಗ ಕಳ್ಳಿಗಿಡದ ಹೂವುಗಳನ್ನೂ ಜೋಡಿಸಿ ಹಾರವನ್ನಾಗಿಸುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ವೈದೇಹಿ ಅವರ ಕೈಯಲ್ಲಿರುವ ದಾರ ಹೂವಿಗಿಂತ ದಪ್ಪಾಗಿದೆ. ಹಾಗಂತ ಸೂಜಿಯಲ್ಲಿ ಹಗ್ಗ ಪೋಣಿಸಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಕೆಲವು ಕಡೆ ಅವರು ಸೂಜಿ ದಾರವಿಲ್ಲದೆ ನೆಲೆದ ಮೇಲೆ ಹೂವುಗಳನ್ನು ಜೋಡಿಸಿಟ್ಟು ‘ಇದು ಹೂವಿನ ಹಾರ’ ಎಂದು ಹೇಳಲು ಹೊರಟಂತಾಗಿದೆ. ಆದರೆ, ಅದನ್ನು ನಂಬಲು ಎಷ್ಟು ಜನರಿಗೆ ಸಾಧ್ಯ?
‘ಕ್ರೌಂಚ ಪಕ್ಷಿಗಳು’ ಭಾರತೀಯ ಹಾಗೂ ಭಾರತೇತರ ಭಾಷೆಗಳಿಗೆ ತರ್ಜುಮೆಗೊಂಡು ಅವರೂ ಗಂಭೀರವಾಗಿ ಓದಿದರೆ, ಪ್ರಸ್ತುತ ಸಂದರ್ಭದ ಕನ್ನಡ ಕಥಾ ಸಾಹಿತ್ಯದ ಮಟ್ಟಕ್ಕೆ ಹುಬ್ಬೇರಿಸಬಹುದು! ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದರೆ ಇನ್ನೂ ಹೆಚ್ಚು ಹುಬ್ಬುಗಳು ಮೇಲೆರಬಹುದು!!
* ಡಾ.ಕೆ.ಎನ್.ದೊಡ್ಡಮನಿ
ಗುರುವಾರ, ಫೆಬ್ರವರಿ 18, 2010
ಶುಕ್ರವಾರ, ಜನವರಿ 15, 2010
ನನ್ನ ಸ್ಟೈಲೇ ಬೇರೆ!
ಕಾಲ ಬದಲಾಗಿದಾವ, ಹಾಗಂತ ನಾನೇನು ಬದಲಾಗಿಲ್ರಿ. ಖರೇ ಅಂದ್ರ ನಾನೇ ಬೇರೇ ಅದೀನಿ, ನನ್ನ ಸ್ಟೈಲೇ ಬೇರೇ ಅದ!
ಅಂದು:
ಅವ್ವ ಹಾಕಿದ ಕೈಕಾಲಗಡಗ
ಬಿಚ್ಚಿ ಬಿದ್ದರೂ ಹುಡುಕಿ ತಂದು
ಬಿಗಿಯಾಗಿಸಿಕೊಂಡು ಹೆಜ್ಜೆ ಹಾಕುತಿದ್ದೆ,
ಎಲ್ಲರಿಗೂ ಗುರುತಾಗಲೆಂದು.
ಅಜ್ಜಿ ಕಟ್ಟಿದ ಉಡದಾರ
ಕೊಳೆತು ಹರಿದು ಹೋದರೂ
ಹೊಸದಾರ ಕಟ್ಟಿಸಿಕೊಂಡು
ನಾಡಿ ಇಲ್ಲದ ಚಡ್ಡಿ ಸಿಗಿಸುತಿದ್ದೆ.
ಎಲ್ಲಮ್ಮನ ಜಾತ್ರೆಯಲಿ ತಂದ
ಕೋರೆಹಲ್ಲಿನ ಬಿಳಿತಾಯ್ತದ
ಕೊರಳಿನ ಕರಿದಾರ ಬಾಯಲ್ಲಿ ನೆನೆದರೂ
ಹನುಮಂತನ ಹೊಸ ತಾಯ್ತ ಕಟ್ಟಿ
ಕೊರಳುಬ್ಬಿಸಿ ತಿರುಗುತಿದ್ದೆ
ಯಾವ ದೆವ್ವ ಏನೂ ಮಾಡುವುದಿಲ್ಲ ಎಂದು!
ಇಂದು:
ನಾನು ಸುಧಾರಿಸಿದ್ದೇನೆ.
ಅವಾವೂ ಇಲ್ಲ, ಎಲ್ಲವೂ ಕಳಚಿ ಬಿದ್ದಿವಿಯೋ
ಕಳೆದು ಹೋಗಿವಿಯೋ ನೆನಪಿಲ್ಲ.
ಹಾಗಂತ ಲೊಂಡ ಕೈಯಿ
ಬೋಳ ಸೊಂಟ, ಬತ್ತಲೆ ಕೊರಳಂತ ಭಾವಿಸಬೇಕಾಗಿಲ್ಲ.
ಆಗಲೇ ಹೇಳಿದನಲ್ಲಾ,
ನಾನು ಭಾಳ ಸುಧಾರಿಸಿದ್ದೇನೆಂದು;
ಮಾವ ಕೊಡಿಸಿದ ಕಂಪನಿ ಗಡಿಯಾರ
ಅತ್ತಿ ಕಟ್ಟಿಸಿದ ಬಂಗಾರ ಚೈನ್
ನಡದಾಗ ಬೆಳ್ಳಿ ಉಡದಾರ
ನಾನ ಬೇಡ ಅಂತ ಹೇಳಿದೆ.
ಏಕೆಂದರೆ,
ಮೈತುಂಬಾ ಗುಂಡಿ, ಹುಕ್ಕ ಇರುವ
ಸಫಾರಿ ಡ್ರೆಸ್
ಹೆಂಡತಿಯ ಡ್ಯಾಡಿ ಮಮ್ಮಿನ ಕೊಟ್ಟಾರ!
ಹಿಂಗಾಗಿ, ನನಗ್ಯಾರೂ ಕಾಣಿಸುವುದಿಲ್ಲ
ಕಂಡ್ರೂ ನಾ ನೋಡೋದಿಲ್ಲ.
ನಾನ ಬೇರೆ!
ನನ್ನ ಸ್ಟೈಲೇ ಬೇರೆ!
* ಡಾ.ಕೆ.ಎನ್. ದೊಡ್ಡಮನಿ
ಅಂದು:
ಅವ್ವ ಹಾಕಿದ ಕೈಕಾಲಗಡಗ
ಬಿಚ್ಚಿ ಬಿದ್ದರೂ ಹುಡುಕಿ ತಂದು
ಬಿಗಿಯಾಗಿಸಿಕೊಂಡು ಹೆಜ್ಜೆ ಹಾಕುತಿದ್ದೆ,
ಎಲ್ಲರಿಗೂ ಗುರುತಾಗಲೆಂದು.
ಅಜ್ಜಿ ಕಟ್ಟಿದ ಉಡದಾರ
ಕೊಳೆತು ಹರಿದು ಹೋದರೂ
ಹೊಸದಾರ ಕಟ್ಟಿಸಿಕೊಂಡು
ನಾಡಿ ಇಲ್ಲದ ಚಡ್ಡಿ ಸಿಗಿಸುತಿದ್ದೆ.
ಎಲ್ಲಮ್ಮನ ಜಾತ್ರೆಯಲಿ ತಂದ
ಕೋರೆಹಲ್ಲಿನ ಬಿಳಿತಾಯ್ತದ
ಕೊರಳಿನ ಕರಿದಾರ ಬಾಯಲ್ಲಿ ನೆನೆದರೂ
ಹನುಮಂತನ ಹೊಸ ತಾಯ್ತ ಕಟ್ಟಿ
ಕೊರಳುಬ್ಬಿಸಿ ತಿರುಗುತಿದ್ದೆ
ಯಾವ ದೆವ್ವ ಏನೂ ಮಾಡುವುದಿಲ್ಲ ಎಂದು!
ಇಂದು:
ನಾನು ಸುಧಾರಿಸಿದ್ದೇನೆ.
ಅವಾವೂ ಇಲ್ಲ, ಎಲ್ಲವೂ ಕಳಚಿ ಬಿದ್ದಿವಿಯೋ
ಕಳೆದು ಹೋಗಿವಿಯೋ ನೆನಪಿಲ್ಲ.
ಹಾಗಂತ ಲೊಂಡ ಕೈಯಿ
ಬೋಳ ಸೊಂಟ, ಬತ್ತಲೆ ಕೊರಳಂತ ಭಾವಿಸಬೇಕಾಗಿಲ್ಲ.
ಆಗಲೇ ಹೇಳಿದನಲ್ಲಾ,
ನಾನು ಭಾಳ ಸುಧಾರಿಸಿದ್ದೇನೆಂದು;
ಮಾವ ಕೊಡಿಸಿದ ಕಂಪನಿ ಗಡಿಯಾರ
ಅತ್ತಿ ಕಟ್ಟಿಸಿದ ಬಂಗಾರ ಚೈನ್
ನಡದಾಗ ಬೆಳ್ಳಿ ಉಡದಾರ
ನಾನ ಬೇಡ ಅಂತ ಹೇಳಿದೆ.
ಏಕೆಂದರೆ,
ಮೈತುಂಬಾ ಗುಂಡಿ, ಹುಕ್ಕ ಇರುವ
ಸಫಾರಿ ಡ್ರೆಸ್
ಹೆಂಡತಿಯ ಡ್ಯಾಡಿ ಮಮ್ಮಿನ ಕೊಟ್ಟಾರ!
ಹಿಂಗಾಗಿ, ನನಗ್ಯಾರೂ ಕಾಣಿಸುವುದಿಲ್ಲ
ಕಂಡ್ರೂ ನಾ ನೋಡೋದಿಲ್ಲ.
ನಾನ ಬೇರೆ!
ನನ್ನ ಸ್ಟೈಲೇ ಬೇರೆ!
* ಡಾ.ಕೆ.ಎನ್. ದೊಡ್ಡಮನಿ
ಸೇವಂತಿ ಯಾ ಮಿಸ್ ಸೇವಂತಿ

ಜುಲೈ 7, 2009ರಂದು ಬೆಳಗಾವಿ ಯುವರಂಗ ವೇದಿಕೆಯ ಆಶ್ರಯದಲ್ಲಿ ಧಾರವಾಡದ ಆಟ-ಪಾಠ ಸಾಂಸ್ಕೃತಿಕ ವೇದಿಕೆಯಿಂದ ಸಾಹಿತಿ ಜಯಂತ ಕಾಯ್ಕಿಣಿ ಅವರ "ಸೇವಂತಿ ಪ್ರಸಂಗ" ಕಥಾರೂಪ ಆಧಾರಿತ ನಾಟಕ ಪ್ರದರ್ಶನ ನೀಡಿದರು. ನಾಟಕ ಹೇಗಿತ್ತು?
>>>>
ಬೆಳಗಾವಿಯಲ್ಲಿನ ಸಾಹಿತ್ಯ- ಸಾಂಸ್ಕೃತಿಕ ಬೌದ್ಧಿಕ ದಾರಿದ್ರ್ಯತನವನ್ನು ನಿವಾರಿಸುವಲ್ಲಿ ಹವ್ಯಾಸಿ ರಂಗಭೂಮಿಕೆಗಳು ತಕ್ಕಮಟ್ಟಿಗೆ ಕೆಲಸ ಮಾಡುತ್ತಿವೆ. ಬೆಳಗಾವಿಯ ತಂಡಗಳಿಂದಲೇ ವೈಚಾರಿಕ ನಾಟಕಗಳು ಪ್ರದರ್ಶನಗೊಳ್ಳುವುದು ತೀರ ಕಡಿಮೆಯಾದರೂ ನಾಡಿನ ನೀನಾಸಂ ಸೇರಿದಂತೆ ಪ್ರಮುಖ ಹವ್ಯಾಸಿ ರಂಗಭೂಮಿಯ ತಂಡಗಳಿಂದ ಪ್ರಬುದ್ಧ ನಾಟಕಗಳ ಪ್ರದರ್ಶನಗಳನ್ನು ಮಾತ್ರ ನೀಡುತ್ತಿರುವುದು ಸಮಾಧಾನಕರ ಸಂಗತಿ. ನಾಡಿನ ಇತರೆಡೆ ಹಾಸುಹೊಕ್ಕಾಗಿರುವಂತೆ ಬೆಳಗಾವಿಯಲ್ಲೂ ಇನ್ನೊಬ್ಬರ ಮನೆಯ ಗೊಡೆಯಲ್ಲೂ ಬೇರು ಇಳಿಬಿಟ್ಟಿರುವ ಆಲದ ಮರಗಳ ಕೆಳಗೆ ಹೊಸ ಸಸಿಗಳು ಹೊಸಗಾಳಿ ಬೆಳಕಿನೊಂದಿಗೆ ಅರಳುವುದಕ್ಕೆ ಒಂದಿಷ್ಟು ತೊಂದರೆ ತಾಪತ್ರಯಗಳು ಶಾಶ್ವತ ಎನ್ನುವಂತೆ ಉಳಿದುಕೊಂಡಿವೆ.
ಬೆಳಗಾವಿಯ ಇಂತಹ ಅನೇಕತೆಯ ಮಧ್ಯ ರಂಗಭೂಮಿಯ ಅಷ್ಟುಇಷ್ಟು ಅನುಭವಸ್ಥ ಹೊಸ ಹುಡುಗರಿಂದ ಕಣ್ಣು ಬಿಡುತ್ತಿರುವ ‘ಯುವ ರಂಗಭೂಮಿಯು ಬದಲಾದ ವ್ಯವಸ್ಥೆಯನ್ನು ಮುಕ್ತವಾಗಿ ಗಮನಿಸುತ್ತ ಅದಕ್ಕೊಂದು ರಚನಾತ್ಮಕ ಸಾಂಸ್ಕೃತಿಕ ವೇದಿಕೆ ಕಲ್ಪಿಸುವ ಹಿನ್ನಲೆಯಲ್ಲಿ ಕಾರ್ಯನಿರತವಾಗಿರುವುದು ಪ್ರಶಂಸನಿಯ. ಈ ಯುವ ರಂಗ ವೇದಿಕೆಯ ನೇತೃತ್ವದಲ್ಲಿ ಜುಲೈ 7, 2009ರಂದು ಜಯಂತ ಕಾಯ್ಕಿಣಿ ಅವರ ಸೇವಂತಿ ಪ್ರಸಂಗ ಕಥಾರೂಪ ಆಧಾರಿತ ನಾಟಕವನ್ನು ಧಾರವಾಡದ ಆಟ ಪಾಠ ಸಾಂಸ್ಕೃತಿಕ ವೇದಿಕೆಯ ಮೂಲಕ ಪ್ರದರ್ಶನ ನೀಡಲಾಯಿತು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವೂ ಇದ್ದಂತೆ ಕುರುಹುಗಳು ಕಾಣಿಸುತ್ತಿದ್ದವು.
ಹಸಿವು- ಬಡತನವನ್ನೇ ಬದುಕಿನ ಆಸ್ತಿಯಾನ್ನಾಗಿರಿಸಿಕೊಂಡಿರುವ ಸಮುದಾಯದಲ್ಲಿನ ಕಾಡಿನ ಹೂವೊಂದು ಸುಂದರ ಬದುಕಿನ ಕನಸು ಕಂಡಾಗ ಏನಾಗಬಹುದು? ಈ ಪ್ರಶ್ನೆಗೆ ಒಂದು ಸರಳ ಮತ್ತು ಮೇಲ್ಪದರಿನ ಉತ್ತರವೇ ಜಯಂತ ಕಾಯ್ಕಿಣಿ ಅವರ ಸೇವಂತಿ ಪ್ರಸಂಗ. ನಗರದ ತಿಪ್ಪೆಕ್ರಾಸಿನಲ್ಲಿ ಬಲೂನ ಮಾರುವ ಅಂದದ ಮತ್ತು ಚುರುಕಾದ ಹುಡುಗಿ ಸೇವಂತಿ ಕನಸ್ಸು ಕಾಣುವಂತೆ ಮಾಡಿ, ಕನಸು ನನಸಾಗುವಲ್ಲಿ ನಡೆಯುವ ನಾಗರಿಕ ಸಮಾಜದ ಪ್ರಯತ್ನಗಳು ಮತ್ತು ಅದರ ಹಿಂದಿನ ವ್ಯಾಪಾರೀಕರಣ ಮನೋವೃತ್ತಿ ನಾಟಕದ ಉದ್ದಕ್ಕೂ ಅನಾವರಣಗೊಳ್ಳುತ್ತ ಹೋಗುತ್ತವೆ. ಸೇವಂತಿ ಬಡವಳಾದರೂ ಸ್ವಾಭಿಮಾನಕ್ಕೇನೂ ಕೊರತೆಯಿಲ್ಲ. ತಂದೆ ಕುಡುಕ. ಮಗಳ ಬಗ್ಗೆ ಆತನ ಕಾಳಜಿಯಂತೂ ದೂರದ ಮಾತು; ವ್ಯವಸ್ಥೆಯ ದೋಷಗಳನ್ನು ಮುಂದುಮಾಡಿ ಮಗಳನ್ನು ಮಾರುವುದಕ್ಕೂ ಹೇಸದ ಪುಣ್ಯಾತ್ಮ. ಭಾಷಾ ಅಧ್ಯಯನ ಮಾಡುವ ಭಾರ್ಗವಶಾಸ್ತ್ರಿ ಹಾಗೂ ಸಾಹಿತ್ಯಿಕ ಆಸಕ್ತಿ ಹೊಂದಿದ ನಿವೃತ್ತ ಕ್ಯಾಪ್ಟನ್ ನಾಗರಿಕ ಜಗತ್ತನ್ನು ಜೀರ್ಣಿಸಿಕೊಂಡವರು ಸೇವಂತಿ ಬದುಕಿನಲ್ಲಿ ವಿಶೇಷ ಪಾತ್ರನಿರ್ವಹಿಸುತ್ತಾರೆ.
ತಿಪ್ಪೆಕ್ರಾಸ್ನಲ್ಲಿ ಪುಗ್ಗಾ ಮಾರುವ ಸೇವಂತಿ ಇವರಿಬ್ಬರ ಕಣ್ಣಿಗೆ ಬಿದ್ದಾಗ ಸೇವಂತಿ ಬರೀ ಸೇವಂತಿಯಾಗಿ ಕಾಣಿಸುವುದಿಲ್ಲ. ಸೇವಂತಿ ತನ್ನ ಭವಣೆಯ ಬದುಕನ್ನು ಕಳ್ಳಿಗೆ ಗಂಟ್ಹಾಕಿ ನಲಿಯುತ ಇರುವ ರೀತಿ, ಮಾತನಾಡುವ ವಿಶಿಷ್ಟ ಶೈಲಿ, ಹುಮ್ಮಸ್ಸು, ಕಣ್ಣಲಿ ಅರಳುವ ಬದುಕಿನ ಕಾಂತಿ, ಸೃಜನಶೀಲ ಮನಸ್ಸು ಇದೆಲ್ಲದ್ದಕ್ಕೂ ಪೂರಕವಾದ ಆಕೆಯ ಸೌಂದರ್ಯ ಶಾಸ್ತ್ರಿ ಮತ್ತು ಕ್ಯಾಪ್ಟನ್ ಅವರನ್ನು ಸೆಳೆಯುತ್ತವೆ. ಸೇವಂತಿಯಲ್ಲಿ ಈ ವಿಶೇಷತೆ ಕಂಡಾಗ ಇಬ್ಬರೂ ಮಿಸ್ ಸೇವಂತಿಯನ್ನಾಗಿಸಲು ಸ್ವಂತ ತಮ್ಮ ಮನೆಗೆ ಆಕೆಯನ್ನು ಕರೆದೊಯ್ಯುತ್ತಾರೆ. ಅವರ ದೃಷ್ಟಿಯಲ್ಲಿ ಅನಾಗರಿಕ ಮತ್ತು ಅನಕ್ಷರಸ್ಥಳಾದ ಸೇವಂತಿಯನ್ನು ಕಷ್ಟಪಟ್ಟು ತಿದ್ದಿತೀಡಿ ನಾಗರಿಕ ಜಗತ್ತಿಗೆ ಸನ್ನದ್ದುಗೊಳಿಸಿ ಮಿಸ್ ಸೇವಂತಿಯನ್ನಾಗಿ ಮಾಡಿಯೇ ತೀರುತ್ತಾರೆ. ಸೇವಂತಿ ಮೂಲಕ ಅವರು ಕಟ್ಟಿದ ಕನಸು ನನಸಾಗುತ್ತದೆ. ಮಿಸ್ ಸೇವಂತಿಯನ್ನಾಗಿಸುವುದು ಸೇವಂತಿಕ್ಕಿಂತ ಭಾರ್ಗವಶಾಸ್ತ್ರಿ ಹಾಗೂ ಕ್ಯಾಪ್ಟನ್ ರಿಗೆ ಹೆಚ್ಚಿನ ಆಸಕ್ತಿ ಇರುವುದರಿಂದ ಮಿಸ್ ಸೇವಂತಿಯನ್ನು ಇವರು ಅದರಲ್ಲೂ ವಿಶೇಷವಾಗಿ ಪ್ರೊಫೆಸರಾದ ಶಾಸ್ತ್ರಿಯವರು ತಮ್ಮ ನಾಗರಿಕ ಬುದ್ಧಿಯನ್ನು ಪ್ರದರ್ಶಿಸಿ ಬಂಡವಾಳವನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಆಗ ಮಿಸ್ ಸೇವಂತಿ ಪಾಲಿಗೆ ಮಾನವೀಯತೆ ಸತ್ತು ಹೋಗುತ್ತದೆ. ನಾಗರಿಕ ಜಗತ್ತಿನ ಕ್ರೂರತೆಗಳು ಆಕೆಯನ್ನು ಆಕ್ರಮಿಸುತ್ತವೆ. ಇದರಿಂದ ತೀರ ವ್ಯಥೆಪಡುವ ಮಿಸ್ ಸೇವಂತಿ ನೀಚ ನಾಗರಿಕ ಜಗತ್ತಿನಿಂದ ಹೊರಬರಲು ಪ್ರಯತ್ನಿಸಿ ಮತ್ತೇ ಬಲೂನ ಮಾರುವ ತಿಪ್ಪೆಕ್ರಾಸಿನ ಸೇವಂತಿಯಾಗಬೇಕೆಂದು ಬಯಸುತ್ತಾಳೆ. ಆದರೆ, ಆಕೆ ತಿಪ್ಪೆಕ್ರಾಸಿನ ಎಲ್ಲ ಸಹಜ ಗುಣಗಳನ್ನು ಕಳೆದುಕೊಂಡಿದ್ದರಿಂದ ಮಿಸ್ ಸೇವಂತಿ ಅಳಿಸಿ ಸೇವಂತಿಯಾಗುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಸೇವಂತಿ ಮಿಸ್ ಸೇವಂತಿಯಾದರೂ ಜೀವನದಲ್ಲಿ ಕಂಡ ಕನಸಿನ ಸುಖಮಾತ್ರ ಅನುಭವಿಸುವುದಿಲ್ಲ. ಹೀಗಾಗಿ ಸೇವಂತಿಗೆ ಮಿಸ್ ಸೇವಂತಿ ಕನಸು ಮಾರಕವಾಗಿ ಪರಿಣಮಿಸುತ್ತದೆ. ಇದು ಸೇವಂತಿ ಪ್ರಸಂಗ ನಾಟಕದ ತಿರುಳು.
ಈ ಪ್ರಸಂಗವನ್ನು ಧಾರವಾಡದ ಆಟ-ಪಾಠ ತಂಡದ ಕಲಾವಿದರು ತಕ್ಕಮಟ್ಟಿಗೆ ಚೆನ್ನಾಗಿಯೇ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಂದೂ ಪಾತ್ರವೂ ತನ್ಮಯತೆಯಿಂದ ಅಭಿನಯಿಸಿ ನ್ಯಾಯ ಒದಗಿಸಿವೆ. ಬಲೂನ್ ಮಾರುವ ಸೇವಂತಿ ಪಾತ್ರವನ್ನು ಹುಬ್ಬಳ್ಳಿಯ ಹುಡುಗಿ ಪ್ರೇಮಾಳ ಅನುಪಮ ಅಭಿನಯ ಪ್ರೇಕ್ಷಕರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಪ್ರೇಮಾಳ ಮೈಸಡಿಲಿಕೆಯ ಸಹಜ ಅಭಿನಯ, ಗಟ್ಟಿಧ್ವನಿಯ ಲಯಬದ್ಧತೆಯ ಸ್ಪಷ್ಟವಾದ ಮಾತುಗಳು ಕಲೆಗಾರಿಕೆಗೆ ಹೇಳಿಮಾಡಿಸಿದ ಸ್ವಭಾವಗಳು. ಸಹಜವೆನ್ನುವಂತೆ ಲಭಿಸಿರುವ ಈ ಕಲೆಯನ್ನು ಪ್ರೇಮಾ ಚೆನ್ನಾಗಿ ದುಡಿಸಿಕೊಂಡರೆ ಬಹಳ ಬೇಗ ಪ್ರಸಿದ್ಧ ಕಲಾವಿದೆಯಾಗುವುದರಲ್ಲಿ ಸಂಶಯವಿಲ್ಲ.
ಈ ನಾಟಕದ ವಿಶೇಷತೆಯೆಂದರೆ ಯಾರೊಬ್ಬ ನಿರ್ದಿಷ್ಟ ನಿರ್ದೇಶಕರಿಲ್ಲ. ಎಲ್ಲ ಪಾತ್ರಧಾರಿಗಳು ತಮ್ಮಷ್ಟಕ್ಕೆ ತಾವೇ ನಿರ್ದೇಶಕರು. ಅವರವರ ಪಾತ್ರಗಳಿಗೆ ಅವರೇ ಜವಾಬ್ದಾರರು. ಅದು ಚೆನ್ನಾಗಿ ನಿರ್ವಹಣೆಯಾಗಿದೆ. ಅರ್ಥಪೂರ್ಣವಾದ ಒಳ್ಳೆಯ ಹಿನ್ನೆಲೆಯ ಗಾಯನ ನಾಟಕಕ್ಕೆ ಮೇರಗು ನೀಡಿದೆ. ಆದರೆ, ಹಿನ್ನೆಲೆ ಗಾಯಕರನ್ನು ವೇದಿಕೆಯ ಮೇಲೆ ಒಂದು ಮೂಲೆಯಲ್ಲಿ ಪ್ರದರ್ಶಿಸುವುದು ಅಷ್ಟೊಂದು ಸೂಕ್ತ ಅನ್ನಿಸುವುದಿಲ್ಲ. ಇಂಥ ಸಣ್ಣ ಪುಟ್ಟ ತೊಂದರೆ ಮತ್ತು ಕೆಲ ಆಭಾಸಗಳನ್ನು ಹೊರತುಪಡೆಸಿದರೆ ನಾಟಕ ಉತ್ತಮವಾಗಿಯೇಮೂಡಿಬಂದಿದೆ.
ಆದರೆ, ಕಥಾ ವಸ್ತುವಿಗೆ ಸಂಬಂಧಿಸಿದಂತೆ ಹೇಳುವುದಾದರೆ ಸೇವಂತಿಯ ಪ್ರತಿಭೆಯನ್ನು ಹೊರಗೆಳೆಯುವಲ್ಲಿ ಭಾರ್ಗವಶಾಸ್ತ್ರಿ ಹಾಗೂ ಕ್ಯಾಪ್ಟನ್ ನಿರ್ವಹಿಸಿದ ಸನ್ನಿವೇಶ ಅತೀ ಹುಡುಗಾಟಿಕೆಯಿಂದ ಕೂಡಿರುವುದರಿಂದ ನಾಟಕದ ಕಥಾವಸ್ತುವಿನ ಗಾಂಭೀರ್ಯತೆಗೆ ಭಂಗವುಂಟಾದಂತಾಗಿದೆ.
* ಡಾ.ಕೆ.ಎನ್.ದೊಡ್ಡಮನಿ, ಬೆಳಗಾವಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)