ನಿತ್ಯ ಕೂಡಿಯೇ ಇರುತ್ತಿದ್ದ ನಾವುಗಳು ವಾರ್ಷಿಕೋತ್ಸವ ದಿನದಂದು ಪಡೆದ ಸರ್ಟಿಫಿಕೇಟ್, ಪಾರಿತೋಷಕಗಳ ಮೂಲಕ ಮತ್ತು ಅಂದು ಆಗಮಿಸುವ ಮುಖ್ಯ ಅತಿಥಿಗಳೊಂದಿಗೆ ಒಂದು ಫೋಟೋ ತೆಗೆಯಿಸಿಕೊಂಡರೆ ಮುಗಿಯಿತು ಸಂಭ್ರಮ. ಅದನ್ನೇ ಪುಸಕ್ತದಲ್ಲಿ ಹಾಕಿಟ್ಟು ವರ್ಷಾನುಗಟ್ಟಲೆ ನೋಡಿ ನೆನೆಸಿಕೊಂಡು ಸಂತೋಷಿಸುತ್ತಿದ್ದೆವು. ಆ ನಿರ್ಮಲ ನಗೆಯೇ ನಮ್ಮ ಪ್ರೀತಿಯ ಪ್ರತಿಬಿಂಬವಾಗಿರುತ್ತಿತ್ತು.
ಈಗಿನ ಕಾಲದ ಹುಡುಗರು ಹುಡುಗಿಯರು ಹಾಗೆಯೇ ಇರಬೇಕೆಂದು ಖಂಡಿತವಾಗಿಯೂ ನನ್ನ ಅಭಿಪ್ರಾಯವಲ್ಲ. ಪರವಾಗಿಲ್ಲ. ಕಾಲ ಬದಲಾಗುತ್ತದೆ, ಬದಲಾಗಿದೆ! ನಮ್ಮ ಯುವಕರು ಜಾಗತೀಕರಣದ ವೇದಿಕೆಯ ಮೆಲೆ ಪ್ರೀತಿಯನ್ನು ‘ಉದಾರೀಕರಣ"ಗೊಳಿಸಿಲು ಹೊರಟಿದ್ದಾರೆ. ಜಯವಾಗಲಿ. ಇದಕ್ಕೆ ಮುಂದುವರೆದ ಅನೇಕ ಪಾಲಕರ ಅನುಮತಿಯೂ ದೊರಕಿದೆ. ಅದಕ್ಕಾಗಿ ಫೆಬ್ರುವರಿ 14ರ ದಿನವನ್ನು ಪ್ರೀತಿಯ ದಿನವೆಂದು "ಅಧಿಕೃತವಾಗಿ" ನಿಗದಿಪಡಿಸಲಾಗಿದೆ. ಅ ದಿನ ಹುಡುಗ ಹುಡುಗನನ್ನು, ಮಗ ತಂದೆ- ತಾಯಿಯನ್ನು, ಮೊಮ್ಮಗ ಅಜ್ಜ-ಅಜ್ಜಿಯನ್ನು, ಅಕ್ಕ ತಂಗಿಯನ್ನು ಎಷ್ಟು ಪ್ರೀತಿಸುತ್ತಾರೊ ಹೇಳಲಿಕ್ಕಾಗದಿದ್ದರೂ ಸಹಿತ, ಅಂದು ಹುಡುಗ ಹುಡುಗಿ ಅಥವಾ ಹುಡುಗಿ ಹುಡುಗನ ಮಧ್ಯೆ ಬಿರಿದ ತುಟಿಗಳ ಮೂಲಕ ಹರಿಯುವ ಪ್ರೀತಿಯ ಹೊಳೆಗೆ ದಡವೆಂಬುದೇ ಇರುವುದಿಲ್ಲ.
ನಿಮಗೆ ಗೊತ್ತಿಲ್ಲ ! ಪ್ರೀತಿ ಎನ್ನುವುದು ಅಂದು (ಫೆ 14 ಗುರುವಾರ)ಅಷ್ಟೊಂದು ಆಳ ಅಗಲದ ವ್ಯಾಪ್ತಿ ಪಡೆದುಕೊಂಡಿರುತ್ತದೆ. ಯಾಕೆಂದರೆ, ಆ ದಿನ ಸಭ್ಯರೆನಿಸಿಕೊಂಡವರೂ, ಪ್ರೀತಿಸದೇ ಇರುವವರರು ಪ್ರೀತಿಯ ದಿನದ ನಶೆಯಲ್ಲಿ ತೇಲುತ್ತಿರುವವರನ್ನು ಪ್ರಶ್ನಿಸುವಂತಿಲ್ಲ. ಹೀಗಾಗಿ ಅಂದಿನ ಪ್ರೀತಿ ಪ್ರಶ್ನೆಯ ನೆತ್ತಿಏರಿ ಕುಳಿತಿರುತ್ತದೆ. ಈ ಪ್ರೀತಿಯ ದಿನಕ್ಕೆ ತಿಂಗಳಾನುಗಟ್ಟಲೆ ಯೋಚನೆ ಯೋಜನೆಗಳು. ಕಷ್ಟಪಟ್ಟು ಒಂದು ಗಿಫ್ಟ್ ಸಂಗ್ರಹ. ಅದನ್ನು ಕೊಟ್ಟು ಇಂಗ್ಲಿಷಿನಲ್ಲಿ ‘ ಐ ಲವ್ ಯು" ಎಂದು ಹೃದಯ ಬಿಚ್ಚಿ ಹೇಳಿಕೊಳ್ಳುವುದು.
ಇಡೀ ದಿನ ಜೋಡಿಬಿಲ್ಲು ಬಿಗಿದಂತೆ ಒಂದಾಗಿ ಕಳೆಯೋದು. ಒಂದು ಸಿನಿಮಾ ನೋಡುವುದು. ಒಂದು ಹಾಡನ್ನು ಡೌನ್ ಲೋಡ್ ಮಾಡಿಕೊಳ್ಳುವುದು. ಬದಲಾವಣೆಯ ಗಾಳಿಯಲ್ಲಿ ಬಹಳ ಮುಂದೆ ಸೆಳೆದುಕೊಂಡುಹೋದವರು ಯಾವುದೋ ಒಂದು ಹೋಟೆಲಿನಲ್ಲಿ ರಾತ್ರಿ ಕಳೆಯೋದು ಅಥವಾ ರಾತ್ರಿಯಲ್ಲಿ ಅವರೇ ಕಳೆದುಹೋಗುವುದು. ಇದು ಜಾಗತೀಕರಣ ಯುಗದ ನಮ್ಮ ಯುವಕರ ಪ್ರೀತಿ ಮತ್ತು ಪ್ರೀತಿಯ ದಿನಾಚರಣೆಗೊಂದು ವ್ಯಾಖ್ಯಾನವಾಗಿದೆ. ಇಂಥವರ ಪಾಲಿಗೆ ಫೆಬ್ರುವರಿ 14ರ ನಂತರದ ಪ್ರೀತಿ ಹಳಿಸಿಹೋಗಿರುತ್ತದೆ ಎಂದು ಹೇಳಿದರೆ ಅಪರಾಧವಾಗುತ್ತದೆ!
ವಿಪರ್ಯಾಸವೆಂದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನವನ್ನಾಗಲಿ, ಸ್ವತಂತ್ರ ಭಾರತದಲ್ಲಿ ಸಂವಿಧಾನ ಜಾರಿಗೊಳಿಸಿದ ದಿನವನ್ನಾಗಲಿ, ಸತ್ಯ,ಅಹಿಂಸೆಯ ಸಾಕಾರಮೂರ್ತಿ ಗಾಂಧೀಜಿ ಜಯಂತಿಯನ್ನಾಗಲಿ ಆಚರಿಸಲು ಇದೇ ನಮ್ಮ ಯುವಕರು ಯೋಜನೆ ಹಾಕುವುದಂತಿರಲಿ ಅದರ ಬಗ್ಗೆ ನೆನಪೂ ಇರುವುದಿಲ್ಲ. ವಿಚಿತ್ರವೆಂದರೆ ಹಾಗೆಂದರೇನು? ಎಂದು ಕೇಳುವ ಭೂಪರೂ ಇದ್ದಾರೆ. ಈ ದಿನಾಚರಣೆಗಳ ಕುರಿತು ಟಿವಿ ಚಾನಲ್ಗಳಲ್ಲಿ ಪ್ರಸಾರವಾಗುತ್ತಿದ್ದರೆ ತಕ್ಷಣಾ ಆ ವಾಹಿನಿಯನ್ನು ಬದಲಾಯಿಸಿ ಎಫ್ ಟಿವಿದಂತಹ ಸುಂದರವಾದ ಚಾನಲ್ಗಳಿಗೆ ಲಗ್ಗೆ ಇಡುತ್ತಾರೆ.
ಇವರೆಲ್ಲರು ನಾನರಿಯದ ಅದ್ಯಾವದೋ ಪ್ರೀತಿಯನ್ನು ಫೆಬ್ರುವರಿ 14ರಂದು ಮಾತ್ರ ಹುಡುಕಿ ಹಂಚಿಕೊಳ್ಳುತ್ತಿರುತ್ತಾರೆ. ಇದು ಹುಡುಗರ ಸ್ವಭಾವ ಮಾತ್ರವೆಂದು ಭಾವಿಸಬೇಕಾಗಿಲ್ಲ; ಅಸಂಖ್ಯಾತ ಹುಡುಗಿಯರು ಪುರುಷಪ್ರಧಾನ ವ್ಯವಸ್ಥೆಯನ್ನು ಮೀರಿ ಮುನ್ನುಗ್ಗಿದ್ದಾರೆ. ಬದಲಾವಣೆಯ ಗಾಳಿಗೆ ಸಿಕ್ಕವರಂತೂ ಬಹಳ ದೂರಕ್ರಮಿಸಿದ್ದಾರೆ. ಹಾಗಂತ ಪ್ರೀತಿ ಮಾಡೋದು ತಪ್ಪು ಎಂದು ಹೇಳುತ್ತಿಲ್ಲ. ಪ್ರೀತಿ ಮಾಡೋದಕ್ಕೆ ದಿನಾ ನಿಗದಿ ಪಡಸೋದು ಎಂದರೆ ನನಗೆ ಯಾಕೋ ಸಹಿಸಲಾಗುತ್ತಿಲ್ಲ.
ಯುರೋಪ್ ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲಿ ಗಂಡ ಹೆಂಡತಿಯನ್ನು, ತಾಯಿ ಮಗನನ್ನು, ಅಣ್ಣ ತಮ್ಮನನ್ನು, ಅಕ್ಕ ತಂಗಿಯನ್ನು ಮಮತೆಯಿಂದ ಕಾಣುವ ಮತ್ತು ಕೂಡುವ ಭಾವನೆಗಳನ್ನೇ ದುರದೃಷ್ಟವಶಾತ್ ಕಳೆದುಕೊಂಡಿರುತ್ತಾರೆ. ಕೆಲಸದ ಒತ್ತಡದಲ್ಲಿ ಅವರಿಗೆ ಸಿಗುವುದು ವಾರಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕೊಮ್ಮೆ , ಕೆಲವರಿಗೆ ಅದೂ ಫೆಬ್ರುವರಿ 14ರಂದೇ. ಭಾವನಾತ್ಮಕವಾಗಿ ವಿಲಿವಿಲಿ ಒದ್ದಾಡುತ್ತಿರುವ ಪ್ರಿಯಕರ ಪ್ರೇಯಸಿಯರಿಗಂತೂ ಆ ದಿನ ತಮ್ಮ ಪ್ರೀತಿಯನ್ನು ರಿನಿವಲ್ ಮಾಡಿಕೊಳ್ಳುವ ಅಪರೂಪದ ದಿನ. ಆ ಘಳಿಗೆಗಾಗಿಯೇ ಅವರು ಕಾಯುತ್ತಿರುತ್ತಾರೆ.
ಭಾರತ ಎಷ್ಟೇ ಮುಂದುವರೆದಿದೆ ಮುಂದುವರೆಯುತ್ತಿದೆ ಎಂದರೂ ಇಂಥ ಔಪಚಾರಿಕ ದುರಂತದ ಸ್ಥಿತಿಯನ್ನು ಮುಟ್ಟಿಲ್ಲ. ' ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ", ‘ ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ"ಎಂಬ ಮಮತೆಯ ಬದುಕನ್ನು ನಾವು ಇನ್ನೂ ಕಾಣುತ್ತೇವೆ. ಕೆಲವರಿಗೆ ಅದು ಸೆಗಣಿ ಸಾರಿಸಿದಂತೆ ಆಗಿರಬಹುದು. ಅದು ಅವರು ಪಡೆದುಕೊಂಡ ಭಾಗ್ಯ. ಅದು ಅವರ ಮಲಗು ಕೋಣೆಗೆ ಸಂಬಂಧಿಸಿದ್ದರಿಂದ ಅದನ್ನು ಅವರೇ ಸುಧಾರಿಸಿಕೊಳ್ಳಬೇಕಾಗುತ್ತದೆ.
ದಿನವಿಡೀ ದುಡಿದು ಬಾಡಿದ ಮೊಗದೊಂದಿಗೆ ಮನೆ ಸೇರುವ ಭಾರತದ ಗಂಡ ಹೆಂಡತಿ ‘ ಐ ಲವ್ ಯು" ಎಂಬ ಡೈಲಾಗ್ ಹೇಳುವುದಿಲ್ಲ. ಅಕಸ್ಮಾತ್ ಬಾಯಿ ಚಪಲ ತೀರಿಸಿಕೊಳ್ಳಲು ಹೇಳಿದರೂ ಕಂಡವರು ‘ಇವಕೇನ ತೆಲಿ ಕೆಟ್ಟೇತೆನ, ಹಿಂಗ್ಯಾಕ ಮಾಡಾಕ ಹತ್ಯಾವ್" ಎಂದು ದೇಶಿ ಭಾಷೆಯಲ್ಲಿ ಮಂಗಳಾರತಿ ಎತ್ತುವುದಂತೂ ಗ್ಯಾರಂಟಿ.ಅದಕ್ಕೇ ಹೇಳೋದು, ನಮ್ಮಲ್ಲಿಯ ಸಂಸಾರದ ಚಿತ್ತಾರವೇ ಬೇರೆ; ಇಲ್ಲಿ ಕೃತ್ರಿಮ ವರ್ತನೆಗೆ ಜಾಗೆ ಇಲ್ಲ. ಹೀಗಾಗಿ ಇಲ್ಲಿ ಗಂಡ- ಹೆಂಡತಿ ಪ್ರೀತಿಯನ್ನು ಕೈಯಾಡಿಸಿ ಹುಡುಕುವ ದುಸ್ಥಿತಿಯಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಪ್ರೀತಿಯ ಬರಡುತವನ್ನು ಸೃಷ್ಟಿಸಿಕೊಂಡು ಕತ್ತಲಲ್ಲಿ ನೆರಳನ್ನು ಹುಡುಕುವ ಪ್ರಯತ್ನದಲ್ಲಿ ತೊಡಗಿದ್ದಾರೆ; ಬೇರೆಯವರೂ ಹಾಗೆ ಮಾಡುವಂತೆ ಮಾಡುತ್ತಿದ್ದಾರೆ.
ಅಂತರಂಗದಲ್ಲಿ ಅರಳಿ ವದನದಲ್ಲಿ ಸುಗಂಧ ಸೂಸುವ ಪ್ರೀತಿ ಅಗಮ್ಯ ಹಾಗೂ ಅವ್ಯಕ್ತವಾದದ್ದು. ‘ ಐ ಲವ್ ಯು" ಎಂದಾಗ ಅದು ‘ಲವ್" ಅನಿಸಿಕೊಳ್ಳುತ್ತದೆ ಹೊರತು ನಮ್ಮ ‘ಪ್ರೀತಿ" ಅನ್ನಿಸಿಕೊಳ್ಳುವುದಿಲ್ಲ. ‘ಪ್ರೀತಿ" ಅನ್ನೋದು ಆಕಳಿಕೆಯ ಬಾಯಿಯಿಂದ ಹೊರಬರುವ ದುರ್ಗಂಧವಲ್ಲ; ಅಂತರಂಗದ ನಗೆ ಮಿಂಚಿನಲ್ಲಿ ಬೆಳಕು ಚೆಲ್ಲುವ ಸ್ಫಟಿಕ. ಅಧ್ಯಾತ್ಮಿಕ ನೆಲೆಯಲ್ಲಿ 12ನೇ ಶತಮಾನದ ನಮ್ಮ ಅಕ್ಕ ಚೆನ್ನಮಲ್ಲಿಕಾರ್ಜುನನಲ್ಲಿ ಹೊಂದಿದ ಪ್ರೀತಿಗೆ ಯಾವ ಬೆಲೆ ಕಟ್ಟಲಾದೀತು.
ಪ್ರೇಮ ಕಾಮಗಳನ್ನು ಯಾರೂ ಯಾರಿಂದಲೂ ಕಲಿಯಬೇಕಾಗಿಲ್ಲ. ಅದು ಕಲಿಸುವ ವಿದ್ಯೆಯೂ ಅಲ್ಲ. ಕಾಮಗಳಿಗೆ ಅಧಿದೇವತೆಗಳಾಗಿರುವ ಮನ್ಮಥ ರತಿಯರನ್ನು ಕೊಟ್ಟಿದ್ದು ಭಾರತೀಯ ಪುರಾಣವೇ. ಯಮುನಾ ನದಿ ದಡದಲ್ಲಿಯ ಕೃಷ್ಣ ರಾಧೆಯರ ಪ್ರೇಮ ಪ್ರಕರಣ, ನಳದಮಯಂತಿಯರ ವಿರಹವೇದನೆ, ಶ್ರೀನಿವಾಸ ಪದ್ಮಾವತಿಯರ ಮುಖಾಮುಖಿ ಇವೆಲ್ಲವೂ ಭಾರತೀಯ ಪ್ರೀತಿ ಪ್ರೇಮ ಪ್ರಣಯದ ಸಂಕೇತಗಳಾಗಿವೆ.
ಪ್ರೀತಿ ಪ್ರೇಮದ ಭಾವನಾತ್ಮಕ ಅಮೋಘ ಮಹಾಕಾವ್ಯ ಭಾರತೀಯ ಸಂಸ್ಕೃತಿಯಲ್ಲಿ ಮೈಮುರಿದುಕೊಂಡು ಬಿದ್ದಿರುವಾಗ ವಿದೇಶಿಯ ಕುರುಡು ಸಂಸ್ಕೃತಿಯ ಕೈಡಿದು ಕಾಡಿನಲ್ಲಿ ನಡೆಯುವ ಅವಶ್ಯಕತೆ ಇದೆಯೇ? ಜ್ಞಾನ ಪರಂಪರೆಯಲ್ಲಿ ಮಹತ್ವದ್ದೆನಿಸಿದ ‘ಕಾಮಸೂತ್ರ"ದ ಕರ್ತೃ ವಾತ್ಸಾಯನ ಮುನಿ ಭಾರತದವನೇ ಆಗಿದ್ದಾನಲ್ಲವೆ. ‘ಮೇಘ ಸಂದೇಶ"ವನ್ನು ಬರೆದ ಕಾಳಿದಾಸ ಈ ನೆಲದವನೇ ಅಲ್ಲವೆ. ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು" ಎಂದು ಸಾರಿಲ್ಲವೇ ನಮ್ಮ ವರಕವಿ ಬೇಂದ್ರೆ. ಹೌದು, ಗಂಡು ಹೆಣ್ಣಿನ ನಡುವೆ ಮೂಡುವ ಆಕರ್ಷಣೆ ಪ್ರಕೃತಿ ಸಹಜವಾದದ್ದು. ಅದಿಲ್ಲದೆ ಬದುಕು ಸಾಗದು. ಪ್ರೇಮವೂ ಬೇಕು ಪ್ರಣಯವೂ ಬೇಕು ಕಾಮವೂ ಬೇಕು. ಅವೆಲ್ಲ ಮಹಾತ್ಮಾ ಗಾಂಧೀ ರಸ್ತೆಯ ಫುಟ್ ಪಾತ್ ನಲ್ಲಿ, ಕೆಪೆಕಾಫಿ ಡೇ ಅಂಗಡಿಗಳಲ್ಲಿ, ಇಮೇಲ್ ನಲ್ಲಿ ಸಿಗುವಂಥದಲ್ಲ.
ಶನಿವಾರ, ಜುಲೈ 11, 2009
ಕಂಬಾರರು ನಿದ್ದೆ ಮಾಡ್ತಿದಾರೆ, ನಿಶ್ಯಬ್ದ!

ಕಳೆದ ಬಾರಿ ಅಂದರೆ 2006ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ನೀಡಿದ ಭರವಸೆಗಳನ್ನು ಖಾಲಿಯಾಗಿರುವ ಸರ್ಕಾರದ ತಿಜೋರಿಯಲ್ಲಿ ಲಾಕ್ ಮಾಡಿಟ್ಟಿರಬೇಕಾದರೆ ಈಗ ಅದೇ ನೆಲದಲ್ಲಿ ಅದೇ ರೀತಿ ಮತ್ತೊಂದು ಅಧಿವೇಶನ ನಡೆದುಹೋಯಿತು. ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆದು ಹೋಯಿತು ಎಂದೇ ಹೇಳಬಹುದು ಹೊರತು ಅದರಿಂದ ಏನಾಯಿತು? ಏನಾಗಬಹುದು? ಎಂಬ ಪ್ರಶ್ನೆಗಳಿಗೆ ಅಷ್ಟು ಸ್ಪಷ್ಟವಾದ ಉತ್ತರಗಳು ನಮಗೆ ಸಿಗುವುದಿಲ್ಲ. ಆದರೆ, ಕೋಟಿಗಟ್ಟಲೆ ಸಾರ್ವಜನಿಕ ಹಣ ಸರಕಾರದ ಮೂಲಕ ಹರಿದುಹೋದದ್ದು ಮಾತ್ರ ಸತ್ಯ. ಈ ಸಾರ್ವಜನಿಕ ಸಂಪತ್ತಿನ ಹರಿಯುವಿಕೆ ಯಾವ ಪುರುಷಾರ್ಥಕ್ಕಾಗಿ? ನೀವು ಮರೆಯುವ ಮುನ್ನ ಕೆಲವು
‘ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂದು ಸಕಾರ ಡಂಗೂರ ಸಾರಿತಾದರೂ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ದಿಯ ಕುರಿತು ಚರ್ಚಿಸಿದ್ದು, ಕೇವಲ ನೆಪ ಮಾತ್ರ. ಹತ್ತು ದಿನಗಳ ಈ ಅಧಿವೇಶನದಲ್ಲಿ ರಾಜ್ಯಪಾಲರು ಪ್ರಾರಂಭದ ಒಂದು ದಿನ ಜಂಟಿ ಸದನವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಹೊರುತುಪಡೆಸಿದರೆ ಉಭಯ ಸದನಗಳ ಕಲಾಪ ನಡೆದದ್ದು ಕೇವಲ ಆರು ದಿನ ಮಾತ್ರ. ಬೆಳಗಾವಿ ಅಧಿವೇಶನದ ಈ ಆರು ದಿನಗಳಲ್ಲಿ ಹಿರಿಯರ ಮನೆ ಎಂದು ಕರೆಯಿಸಿಕೊಳ್ಳುವ ಮೇಲ್ಮನೆಯಲ್ಲಿ ನಡೆದ ಚರ್ಚೆಯನ್ನು ಮುಂದಿಟ್ಟುಕೊಂಡು ಬೆಳಗಾವಿ ನೆಲದ ಕೆಲ ನಾಯಕರು, ಹಿರಿಯರು, ಬಿದ್ದವಂತರು ನಿದ್ದೆಯಲ್ಲಿಯೇ ಕಳೆದ ಸಂಗತಿಯನ್ನು ಇಲ್ಲಿ ಪ್ರಸ್ತಾಪಿಸಿಲಾಗಿದೆ.
ಬೆಳಗಾವಿ ಅಧಿವೇಶನದ ಆರು ದಿನಗಳ ವಿಧಾನ ಪರಿಷತ್ತಿನ ಕಲಾಪಗಳಲ್ಲಿ ಒಂದೆರಡು ಸಣ್ಣಪುಟ್ಟ ವಿಷಯಗಳನ್ನು ಹೊರತುಪಡೆಸಿದರೆ, ಸುಮಾರು ಐದುವರೆ ದಿನಗಳವರೆಗೆ ಪ್ರತಿಧ್ವನಿಸಿದ್ದು ಬರೀ ಅಕ್ರಮ ಗಣಿಗಾರಿಕೆ ಕುರಿತು. ಅಕ್ರಮ ಗಣಿಗಾರಿಕೆಯ ಪಾಪದ ಕೂಸನ್ನು ಯಾರು ಹೆತ್ತವರು ಎಂಬ ಸತ್ಯ ಬಯಲಿಗೆ ಬರಬೇಕಾದರೆ, ಧಂಧೆಯ ಬಗ್ಗೆ ಸಿಬಿಐಗೆ ಒಪ್ಪಿಸಬೇಕೆಂದು ಪ್ರತಿಪಕ್ಷಗಳ ಪಟ್ಟು; ಇದನ್ನು ಖಂಡತುಂಡವಾಗಿ ನಿರಾಕರಿಸಿ ಜಂಟಿ ಸದನ ಸಮಿತಿಯಿಂದ ಸರ್ವೆ ನಡೆಸುವುದಾಗಿ ಸಾಧಿಸಿದ ಸರ್ಕಾರದ ಹಠಮಾರಿತನದಲ್ಲಿಯೇ ಐದುವರೆ ದಿನಗಳ ಕಲಾಪದ ಸಮಯವನ್ನು ನುಂಗಿತು. ಆದರೆ, ಅಂತ್ಯದಲ್ಲಿ ಆದದ್ದು ಏನು? ನಾಡಿನ ಭೌಗೋಳಿಕ ಸಂಪತ್ತು ಅವ್ಯಾಹತವಾಗಿ ಲೂಟಿಯಾಗುತ್ತಿದೆ, ಸಹಿಸಲು ಅಸಾಧ್ಯವಾದ ಪರಿಸರ ಮಣ್ಣುಗೂಡಿ ಹೋಗುತ್ತಿದೆ, ಮುಂದಿನ ಪೀಳಿಗೆ ಕ್ಷಮಿಸಲು ಸಾಧ್ಯವಾಗದ ದುಷ್ಕೃತ್ಯ, ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಎಂದು ಅಕ್ರಮಗಣಿಗಾರಿಕೆಯ ಮೃಷ್ಟಾನ್ನವನ್ನು ಮುಂದಿಟ್ಟುಕೊಂಡು ಮಂಡಿಸಿದ ಅದಮ್ಯೆ ಸಾಮಾಜಿಕ ಕಳಕಳಿಗೆ ಪ್ರತಿಪಕ್ಷಗಳೂ ಒಳಗೊಂಡಂತೆ ಸರ್ಕಾರವೂ ಸಹಿತ ಧ್ವನಿಗೂಡಿಸಿ ಮಾತನಾಡಿದನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಈ ಕಳಕಳಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಉಭಯರಿಗೂ ಇದಾವುದೂ ಬೇಕಾಗಿಲ್ಲ. ಅವರೇ ಒಪ್ಪಿಕೊಂಡಿರುವಂತೆ ಇಬ್ಬರೂ ಕಳ್ಳರು. ಕಳ್ಳರನ್ನು ಕಳ್ಳರೇ ಹಿಡಿಯುವ ತಂತ್ರದಲ್ಲಿ ನಾಡಿನ ಜನರ ಹಿತಾಸಕ್ತಿ ಅಡಿಗದೆ ಎಂದು ಹೇಳಿದರೆ ಯಾರು ತಾನೆ ನಂಬುತ್ತಾರೆ? ಇದೆಲ್ಲ ರಾಜಕೀಯ ತಂತ್ರಗಾರಿಕೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಮೇಲ್ಮನೆಯ ಕಲಾಪಗಳ ಆರನೇ ದಿನ ಮಧ್ಯಾಹ್ನ ಬೋರಿ ಭೋಜನದ ನಂತರ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆಗೆ ಎತ್ತಿಕೊಳ್ಳುತ್ತಿದ್ದಂತೆಯೇ ಒಬ್ಬೊಬ್ಬರೇ ಸದಸ್ಯರು ಕುಳಿತಲ್ಲಿಂದಲೇ ಮಾಯವಾಗುತ್ತಿದ್ದರು. ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಕರೆದ ಈ ಅಧಿವೇಶನದಲ್ಲಿ ಚರ್ಚೆ ನಡೆಯಲಿಲ್ಲ ಎಂಬ ಕೂಗು ಹೊರಬರುತ್ತಿದ್ದಂತೆ ಸದಸ್ಯರ ನಿದ್ದೆಗಣಿನಲ್ಲಿ ಒಂದಿಷ್ಟು ಚರ್ಚೆ ನಡೆದು ಹೋಯಿತು ಎಂದು ಹೇಳಬಹುದು. ಅದೇನು ಚರ್ಚೆ ಮಾಡಿದರೋ ಅವರಿಗೆ ಮಾತ್ರ ಗೊತ್ತು.
‘ಗಂಡು ಮೆಟ್ಟಿನ ನೆಲ ಎಂದೆಲ್ಲ ಕರೆಯುವ ಬೆಳಗಾವಿಯ ನೆಲದಲ್ಲಿ ನಡೆದ ಈ ವಿಶೇಷ ಅಧಿವೇಶನದ ಮೇಲ್ಮನೆಯಲ್ಲಿ ಬೆಳಗಾವಿ ಒಳಗೊಂಡಂತೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲು ಈ ಭಾಗದ ನಾಯಕರಿಗೆ ದೊರೆತ ಒಂದು ಉತ್ತಮ ಅವಕಾಶ. ಈ ಅವಕಾಶವನ್ನು ಉಪಯೋಗಿಸಿಕೊಂಡು ಈ ಭಾಗದ ಬಗ್ಗೆ ಬುದ್ದಿವಂತರ ಮನೆಯ ಸದಸ್ಯರು ಧ್ವನಿ ಎತ್ತಿದ್ದಾರೆಯೆ? ಎಂಬ ಪ್ರಶ್ನೆಗೆ, ‘ಒಂದಿಷ್ಟು ಮಂದಿ ಎತ್ತಿದರು ಎಂದು ಹೇಳಿ ಸಮಾಧಾನ ಮಾಡಿಕೊಳ್ಳಬಹುದು.
ಮೇಲ್ಮನೆಯಲ್ಲಿ ಎಂ.ಪಿ. ನಾಡಗೌಡ, ಬಸವರಾಜ್ ಹೊರಟ್ಟಿ ಅವರನ್ನು ಹೊರತುಪಡಿಸಿದರೆ ಇನ್ನುಳಿದವರು ಉತ್ತರ ಕರ್ನಾಟಕದ ರುಚಿಕಟ್ಟಾದ ಎಣ್ಣೆಗಾಯ ರೊಟ್ಟಿಯ ಊಟ ಮಾಡಿ ಮೇಲೆ ಒಂದಿಷ್ಟು ತಂಪಾದ ಮಜ್ಜಿಗೆ ಜಡಿದು ಗೊರಕೆ ಹೊಡೆದದ್ದೇ ಜಾಸ್ತಿ. ಮಾಜಿ ಶಿಕ್ಷಣ ಸಚಿವರೂ ಆದ ಬಸವರಾಜ ಹೊರಟ್ಟಿ ಅವರದು ನೇರ ಮತ್ತು ಒಂದು ಬಗೆಯ ಕಡಕ್ಕಾದ ಮಾತುಗಳು. ಅವರು ಸದನದಲ್ಲಿ ಇದ್ದಷ್ಟು ವೇಳೆ ಅತೀ ಕಡಿಮೆ ಮಾತುಗಳಲ್ಲಿ ಅಗದಿ ಕಡಕ್ಕಾಗಿ ಮಾತನಾಡುತ್ತಿದ್ದರು. ಆದರೆ, ಏನ ಕೆಲಸೋ ಏನೋ ಗೊತ್ತಿಲ್ಲ ಪಾಪ, ಅವರು ಸದನದಲ್ಲಿ ಇರುವುದೇ ಕಡಿಮೆ.
ಇದಕ್ಕೆ ಅಪವಾದ ಎನ್ನುವಂತೆ ಡಾ.ಎಂ.ಪಿ.ನಾಡಗೌಡರು. ಸಭಾಪತಿಗಳು ‘ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ ಎಂದು ಹೇಳುವವರೆಗೂ ನಾಡಗೌಡರು ಸದನದಲ್ಲಿ ನಿಷ್ಠೆಯಿಂದ ಕುಳಿತಿರುತ್ತಿದ್ದರು. ‘ಕುಳಿತಿರುತ್ತಿದ್ದರು ಎಂದು ಹೇಳಿದ ಮಾತ್ರಕ್ಕೆ ಸದನದಲ್ಲಿ ಸುಮ್ಮನೆ ಕುಳಿತುಕೊಳ್ಳವವರ ಸಾಲಿನಲ್ಲಿ ಅವರು ಸೇರಿಕೊಂಡಿರಲಿಲ್ಲ. ನಿದ್ದೆಯೂ ಇಲ್ಲ, ಮಾತೂ ಇಲ್ಲದ ಕೆಲ ಸದಸ್ಯರೂ ಪರಿಷತ್ತಿನಲ್ಲಿ ಕುಳಿತಿರುತ್ತಿದ್ದರು. ಅವರು ಯಾವ ಕಾರಣಕ್ಕಾಗಿ ಕುಳಿತಿರುತ್ತಿದ್ದರು ಎಂಬುದು ಕೊನೆಯವರೆಗೂ ಅರ್ಥವಾಗಲಿಲ್ಲ.
ಯಾವುದೇ ವಿಷಯ ಪ್ರಸ್ತಾಪವಾದರೂ ಅದಕ್ಕೆ ನಾಡಗೌಡರ ತಾಳಿಕೊಳ್ಳುವ ಶಕ್ತಿ ಕಡಿಮೆಯಾಗಿ ಮಾತು ಆಡಿಯೇ ತೀರಿಸುತ್ತಿದ್ದರು. ಅವರ ಸ್ವಭಾವವೇ ಹಾಗೆ ಪ್ರತಿಪಕ್ಷದವರು ಮಾತನಾಡುವುದಕ್ಕಿಂತ ಮೊದಲೇ ಸಭಾಪತಿಗಳು ಬಂದು ಕುರ್ಚಿ ಮೇಲೆ ಕುಳಿತಿದ್ದೇ ತಡ ನಾಡಗೌಡರು ಏನಾದರೂ ಪ್ರಸ್ತಾಪಿಸುತ್ತಿದ್ದರು. ಪ್ರತಿಯೊಂದೂ ವಿಷಯವನ್ನು ಹಾಸ್ಯ ಚಟಾಕಿಯ ಮೂಲಕ ಪ್ರಸ್ತಾಪಿಸುವುದು ಸದನದಲ್ಲಿನ ನಾಡಗೌಡರ ಮಾತುಗಾರಿಕೆಯ ಶೈಲಿ. ಆ ಮೂಲಕ ಅವರು ನಿದ್ದೆಯಲ್ಲಿದ್ದವರನ್ನು ಒಂದಿಷ್ಟು ಎಚ್ಚರಗೊಳಿಸುತಿದ್ದರೇನೋ? ಹೀಗಾಗಿ ಹಿರಿಯರ ಮನೆಯಾದ ಮೇಲ್ಮನೆಯಲ್ಲಿ ಎಂ.ಪಿ. ನಾಡಗೌಡರು ಒಬ್ಬ ಒಳ್ಳೆಯ ನಗೆಗಾರರು ಎಂದು ಹೇಳಲು ಅಡ್ಡಿಯಿಲ್ಲ.
ನಾಡಗೌಡರ ಹಾಸ್ಯದ ಮಾತುಗಳಿಗೆ ನಕ್ಕರೆ ಎಲ್ಲಿ ಬಾಯಿ ಮೂಲಕ ತಮ್ಮ ಅಮೂಲ್ಯವಾದ ವಸ್ತು ಕಳೆದುಹೋಗುತ್ತದೆಯೇನೋ ಎನ್ನುವಂತೆ ಹಣೆ ಹದಿನಾರು ಗಂಟುಹಾಕಿ, ಮುಖ ಬಿಗಿ ಹಿಡಿದು ಕುಳಿತ ಗಂಭೀರ ಶೈಲಿಯ ನಾಯಕರೂ ಇದ್ದರು.
ನಿದ್ದೆಯ ದೃಷ್ಟಿಯಿಂದ ಮುಖ್ಯವಾಗಿ ಗಮನಿಸಬೇಕಾದ ಸದಸ್ಯರೆಂದರೆ ನಮ್ಮ ವೀರಕುಮಾರ ಪಾಟೀಲ ಮತ್ತು ಡಾ. ಚಂದ್ರಶೇಖರ ಕಂಬಾರ ಅವರು. ‘ವೀರಕುಮಾರ ಪಾಟೀಲ ಅವರು ಸದನದಲ್ಲಿ ಬಹಳ ಹೊತ್ತಿನವರೆಗೆ ನಿದ್ದೆ ಮಾಡಿದರು ಎಂದು ಹೇಳಿದರೆ ಖಂಡಿತಾ ತಪ್ಪಾಗುತ್ತದೆ. ಆದರೆ, ಅವರು ಸದನದಲ್ಲಿ ಕುಳಿತಿದ್ದಾರೆ ಎಂದರೆ ಮೆಲ್ಲಗೆ ನಿದ್ದೆಗೆ ಜಾರಿದ್ದಾರೆ ಎನ್ನುವಂತೆ ಕಾಣಿಸಿಕೊಳ್ಳುವುದು ಮಾತ್ರ ಸತ್ಯ. ಅದು ಅವರ ಸದನದಲ್ಲಿನ ಕುಳಿತುಕೊಳ್ಳುವ ಶೈಲಿ. ವೀರಕುಮಾರ ಅವರು ಆರು ದಿನಗಳ ಕಲಾಪದಲ್ಲಿ ಒಂದು ಚಕಾರ ಎತ್ತಿಲ್ಲ ಎನ್ನುವುದು ಅದೇ ಒಂದು ದಾಖಲೆ. ಬೆಳಗಾವಿಯವರೇ ಆದ ವೀರಕುಮಾರ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ತಮ್ಮ ಭಾಗದ ಸಮಸ್ಯೆಗಳನ್ನು ಗಂಭೀರವಾಗಿ ಎತ್ತಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲು ಉತ್ತಮ ಅವಕಾಶವಿದ್ದರೂ ಅದನ್ನು ಸದುಪಯೋಗಪಡೆಸಿಕೊಳ್ಳುವ ಮನಸ್ಥಿತಿ ಮಾತ್ರ ಅವರಲ್ಲಿ ಕಡೆಯವರೆಗೂ ಕಂಡು ಬರಲಿಲ್ಲ. ನಿಪ್ಪಾಣಿಯನ್ನು ತಾಲೂಕಾ ಕೇಂದ್ರವನ್ನಾಗಿ ಮಾಡುವ ಆಶೆ ಅವರದ್ದಾಗಿದ್ದರೂ ಆ ಬಗ್ಗೆಯೂ ಅವರು ಒಂದೂ ಮಾತನಾಡಲಿಲ್ಲ.
ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಕುಳಿತ ಸಾಲಿನಲ್ಲಿಯೇ ಅತೀ ಹಿಂದಿನ ಸಾಲಿನ ಕುರ್ಚಿಯಲ್ಲಿ ಕುಳಿತು, ನಿದ್ದೆಗಾಗಿ ಸದನವನ್ನು ಚನ್ನಾಗಿ ಸದುಪಯೋಗಪಡೆಸಿಕೊಂಡವರು ನಮ್ಮ ಸಾಹಿತಿಗಳಾದ ಜೋಕಮಾರಸ್ವಾಮಿ ನಾಟಕದ ಲೇಖಕರೂ ಆದ, ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರು. ಸಭಾಪತಿಗಳು ಕಲಾಪವನ್ನು ಮುಂದೂಡಿದರೋ ಹೇಗೆ? ಎನ್ನುವುದನ್ನು ಗಮನಿಸುತ್ತಿದ್ದರೇನೋ ಎನ್ನುವಂತೆ ಕಂಬಾರರು ಮಧ್ಯ ಮಧ್ಯ ಎಚ್ಚರಗೊಳ್ಳುವುದು ಒಂದು ಸಾಮಾನ್ಯ ದೃಶ್ಯ ಕಂಡುಬಂತು. ಸುಮ್ಮನೆ ಕುಳಿತು ಬೇಸರವಾದಾಗ ಒಂದಿಷ್ಟು ಸದನದ ಹೊರಗೆ ಹೋಗಿ, ಮತ್ತೇ ಮರಳಿ ನಿಧಾನವಾಗಿ ನೆಮ್ಮಿದಿಯ ನಿದ್ದೆಗೆ ಸಾಹಿತಿಗಳು ಜಾರುತಿದ್ದರು. ಆವಾಗ ಅವರು ಬಹುಶಃ ಅವರ ಮುಂದಿನ ಕಾದಂಬರಿಯ ವಸ್ತು ತಂತ್ರಗಳ ಬಗ್ಗೆ ಯೋಚನೆ ಮಾಡುತ್ತಿರೇನೊ? ಅವರು ಎಚ್ಚರಗೊಂಡಾಗ ಪತ್ರಕರ್ತರ ಗ್ಯಾಲರಿಯ ನನ್ನ ಮಗ್ಗುಲಿನಲ್ಲಿ ಕುಳಿತಿದ್ದ ಗೆಳೆಯರೊಬ್ಬರಿಗೆ ‘ ಚಂದ್ರಶೇಖರ ಕಂಬಾರ ಅವರು ಎಚ್ಚರಗೊಂಡಿದ್ದಾರೆ ನೋಡಿ ಎಂದು ಹೇಳಿ, ಇಬ್ಬರೂ ನಕ್ಕು ನಾವೂ ರಿಲ್ಯಾಕ್ಸ್ ಆಗುತ್ತಿದ್ದೆವು.
ಡಾ. ಚಂದ್ರಶೇಖರ ಕಂಬಾರ ಅವರು ವಿಧಾನ ಪರಿಷತ್ತಿಗೆ ನೇಮಕವಾದದ್ದು ಯಾವುದೇ ರಾಜಕೀಯ ಪಕ್ಷದಿಂದಲ್ಲ. ಖ್ಯಾತ ಸಾಹಿತಿಗಳು, ಶಿಕ್ಷಣ ತಜ್ಞರೂ, ಆಡಳಿತಾನುಭವಿಗಳು, ವಿದ್ವಾಂಸರು ಎಂಬ ಕಾರಣಕ್ಕಾಗಿ, ಜನತೆಯ ಹಿತಾಸಕ್ತಿಯ ದೃಷ್ಟಿಯಿಂದ ಅವರಿಂದ ಏನಾದರೂ ಒಂದಿಷ್ಟು ಒಳ್ಳೆಯ ಸಲಹೆ, ಸೂಚನೆಗಳು ದೊರೆತಾವು ಎನ್ನುವ ಕಾರಣದಿಂದ ಅವರನ್ನು ಪಕ್ಷಾತೀತವಾಗಿ ಮೇಲ್ಮನೆಗೆ ನೇಮಕ ಮಾಡಲಾಗಿದೆ. ಒಳ್ಳೆಯ ಮಾತಗಾರರೂ ಆಗಿರುವ ಕಂಬಾರ ಅವರು ಹಳ್ಳಿಯ ಬದುಕಿನ ಒಡಲಿನಿಂದ ಬಂದವರು ಮಾತ್ರವಲ್ಲ, ಆ ಒಡಲನ್ನೇ ಬಂಡವಾಳವನ್ನಾಗಿರಿಸಿಕೊಂಡು ಸಾಹಿತಿಗಳಾಗಿ, ವಿದ್ವಾಂಸರಾಗಿ ಹೆಸರು ಮತ್ತು ಅಧಿಕಾರ ಇತ್ಯಾದಿಗಳನ್ನು ಗಳಿಸಿಕೊಂಡವರು. ವಿಶೇಷವಾಗಿ ಅವರ ಸಾಹಿತ್ಯ ಸಿದ್ಧಿ ಸಾಧ್ಯವಾದದ್ದು ಬೆಳಗಾವಿ ಜಿಲ್ಲೆ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಭೂಮಿಕೆಯಿಂದ. ಹೀಗಾಗಿ ಅವರ ಮೇಲೆ ಬೆಳಗಾವಿ ಜಿಲ್ಲೆಯ ಋಣ ಒಂದಿಷ್ಟು ಜಾಸ್ತಿಯೇ ಇದೆ ಎಂದು ಹೇಳಲು ಅಡ್ಡಿ ಆತಂಕವಿಲ್ಲ.
ಹಲವಾರು ಸಮಸ್ಯೆಗಳ ಮಧ್ಯ ಒದ್ದಾಡುತ್ತಿರುವ ಬೆಳಗಾವಿ ನೆಲದ ಜನತೆ, ಶೈಕ್ಷಣಿಕ ಒಲಯದ ಪ್ರಜ್ಞಾವಂತ ನಾಗರಿಕರು, ಸಾಹಿತ್ಯ ಸಾಂಸ್ಕೃತಿಕ ಒಲಯದ ಹರಿಕಾರರು ಬೆಳಗಾವಿ ಅಧಿವೇಶನದ ಮೂಲಕ ಡಾ. ಚಂದ್ರಶೇಖರ ಕಂಬಾರ ಅವರಿಂದ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಅದು ಸಹಜವೂ ಹೌದು. ದೂರಶಿಕ್ಷಣದ ಎಂ.ಫಿಲ್, ಪಿ.ಎಚ್ಡಿ ಪದವಿಗಳ ವಿಷಯ ಕುರಿತು ಒಂದೆರಡು ಮಾತುಗಳನ್ನು ಅವರು ಆಡಿದ್ದನ್ನು ಹೊರತುಪಡಿಸಿದರೆ ಬೆಳಗಾವಿಯ ಯಾವ ಸಮಸ್ಯೆ ಸಂಗತಿಗಳ ಬಗ್ಗೆ ಶಿಕ್ಷಣ, ಭಾಷೆ ಸಾಹಿತ್ಯ ಸಾಂಸ್ಕೃತಿಕ ಸಂಗತಿಗಳ ಬಗ್ಗೆ ಅವರು ತುಟಿ ಪಿಟ್ಟ ಎನ್ನಲಿಲ್ಲ. ಹೀಗಾಗಿ ಜನತೆ ಅವರ ಮೇಲೆ ಇಟ್ಟುಕೊಂಡ ನಿರೀಕ್ಷೆ ಬೆಳಗಾವಿಯಲ್ಲಿಯೇ ಉಳಿದು ಅವರು ಮಾತ್ರ ಹೇಗೆ ಬಂದಿದ್ದರೋ ಹಾಗೇ ಬೆಂಗಳೂರಿಗೆ ಸರ್ಕಾರದೊಂದಿಗೆ ಹೋದದ್ದು ಮಾತ್ರ ಸತ್ಯ.
ಕಂಬಾರ ಅವರ ಮಗ್ಗಲಿನಲ್ಲಿಯೇ ಕುಳಿತಿದ್ದ ಸ್ಪಿನ್ನರ್ ಪ್ರಕಾಶ ರಾಠೋಡ್ ಅವರು, ಮೇಲಿಂದ ಮೇಲೆ ಮಾತಿನ ಬೌಲಿಂಗ್ ಮಾಡುತ್ತಿದ್ದರು. ಸದನದ ಇನ್ನೊಂದು ಅಂಚಿನಲ್ಲಿ ಕುಳಿತುಕೊಂಡಿದ್ದ ಮತ್ತೊಬ್ಬ ಖ್ಯಾತ ‘ಕವಿ ಪ್ರೊ. ದೊಡ್ಡರಂಗೇಗೌಡರು ದೇವದಾಸಿ ಪದ್ಧತಿ ಅನಿಷ್ಟತೆಯ ಬಗ್ಗೆ ಕಾವ್ಯ ರಚಿಸಿ, ಅದಕ್ಕೆ ಕಾರಣವಾದ ಪುರುಷ ವರ್ಗವನ್ನು ‘ಗಂಡು ಗೂಳಿಗಳು ಎಂದು ಕರೆಯುವುದರ ಮೂಲಕ ಇಡೀ ಸದನದ ಗಮನ ಸೆಳೆಯುತ್ತಿದ್ದರು. ಅಕ್ರಮ ಗಣಿಗಾರಿಕೆ ಕುರಿತು ಕಾವ್ಯ ರಚಿಸಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದರು. ಒಂದಿಷ್ಟು ಮಾತುಗಳನ್ನೂ ಆಡುತಿದ್ದರು. ಇದನೆಲ್ಲಾ ಮೌನವಾಗಿಯೇ ಆಲಿಸುತಿದ್ದ ಕಂಬಾರ ಅವರ ಬಾಯಿಯಿಂದ ಯಾವ ಧ್ವನಿವೂ ಬರುತ್ತಿರಲಿಲ್ಲ.
‘ಡಾ. ಚಂದ್ರಶೇಖರ ಕಂಬಾರ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಹೋಗಿದ್ದಾಗಿದೆ. ಸಿಗಬೇಕಾದ ಅನೇಕ ದೊಡ್ಡವುಗಳೇ ಆದ ಪ್ರಶಸ್ತಿ, ಸನ್ಮಾನಗಳು ಸಿಕ್ಕಿದ್ದೂ ಆಗಿದೆ. ಮತ್ತೇಕೆ ಸದನದಲ್ಲಿ ಅವರು ಮಾತನಾಡುವುದಿಲ್ಲ? ಎಂಬ ಮೂಲ ಪ್ರಶ್ನೆಯೊಂದನ್ನು ನನ್ನ ಗೆಳೆಯ ನನ್ನತ್ತ ಎಸೆದರು. ನಿರುತ್ತರನಾದ ನಾನು ‘ಅದು ಅವರನ್ನೇ ಕೇಳಬೇಕು ಅಂತ ಹೇಳಿ ಮೊಗಮ್ಮಾಗಿ ನಕ್ಕುಬಿಟ್ಟೆ.
‘ದಲಿತ ಕವಿ ಎಂದೇ ಖ್ಯಾತರಾದ ನಮ್ಮ ಡಾ. ಸಿದ್ದಲಿಂಗಯ್ಯ ಅವರು ಇದೇ ರೀತಿ ಸದನವನ್ನು ಪ್ರವೇಶಿಸಿ ಹಾಗೇ ಹೊರಬಂದಾಗ ಅವರು ಸದನದಲ್ಲಿ ಧ್ವನಿ ಎತ್ತಿರುವ ಮಾತುಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದನ್ನು ಕೇಳಿದ್ದೇನೆ. ನಾನು ಅದನ್ನು ಗಮನಿಸಿಲ್ಲ. ಹಾಗಯೇ ನಮ್ಮ ಮಾಜಿ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರ ಹಾಗೂ ಇನ್ನಿತರರು ಸದನದಿಂದ ಹೊರಬಂದಾಗ, ಅವರ ಅಭಿಮಾನಿಗಳು, ಹಿತೈಷಿಗಳು, ಹಿಂಬಾಲಕರು, ಬಾಲಬಡಕರು, ಚೇಲಾಗಳು ಅದಾವ ಧ್ವನಿಯನ್ನು ಸಂಗ್ರಹಿಸಿ ಪ್ರಕಟಿಸುತ್ತಾರೆ ಎಂಬದನ್ನು ಕಾಯ್ದು ನೋಡಬೇಕು. ಹಾಗೇ ಪ್ರಕಟಿಸುವ ಪುಸ್ತಕಕ್ಕೆ ದೊಡ್ಡದಾದ ಪ್ರಶಸ್ತಿಯೊಂದು ಸಿಕ್ಕರೂ ಸಿಗಬಹುದು!
ಬುಧವಾರ, ಮೇ 27, 2009
ಸೋಮವಾರ, ಮಾರ್ಚ್ 9, 2009
ಪತ್ರಿಕೆಗಳು ಮಾರಾಟವಾಗಿವೆ
ಬೆಳಕು ಹರಿಯುವದರೊಳಗಾಗಿ
ಬಿಸಿಬಿಸಿ ಸುದ್ದಿಗಳ ಹೊತ್ತ ಪತ್ರಿಕೆಗಳು
ಮಾರಾಟವಾಗಿವೆ ಕಡ್ಲಿಪುರಿಯಂತೆ
ಸಂಪಾದಕರು ಮಾಲೀಕರ ಕನಿಸಿನಂತೆ
ಹಗಲೆಲ್ಲ ಚಿತ್ರಬಿಡಿಸಿದ
ಕೆಲ ಪತ್ರಕರ್ತರು ನಿನ್ನೆ ನಡುರಾತ್ರಿ
ಬಾರ್ ಕ್ಲಬ್ ಮತ್ತೇಲಿಂದಲೋ
ಮನೆಗಳಿಗೆ ಮರಳಿ,
ಮನೆಯಿಲ್ಲದವರು ಮತ್ತೆಲ್ಲಿಯೋ
ಪಾಪ! ಇನ್ನೂ ಹಾಸಿಗೆಯಲ್ಲಿಯೇ
ಕನವರಿಸುತ್ತಿರುವಾಗ
ಪತ್ರಿಕೆಗಳು ಮಾರಾಟವಾಗಿವೆ
ಮಾರಾಟವಾದ ಪೇಪರಗಳಲ್ಲಿ
ಅಧಿಕಾರಿಗಳ ಮುಗಳ್ನಗೆ, ಕುದರೆ ಸವಾರಿ
ಜನಪ್ರತಿನಿಧಿಗಳ ಅಮೃತಹಸ್ತದ
ಗುದ್ದಲಿ ಪೂಜೆ
ಮಂತ್ರಿಗಳ ಶಂಕುಸ್ಥಾಪನೆ ವಾಗ್ಭೂಷಣ
ಇದ್ದುಳ್ಳವರ ದಾನ ಧರ್ಮದ ಪುಣ್ಯದ ಕೆಲಸ
ಧರ್ಮ ದೇವರುಗಳ ಗುತ್ತಿಗೆದಾರರು
ಸಾಹಿತ್ಯ ಸಂಸ್ಕೃತಿಯ ಖರೀದಾರರು
ತಾರೆಯರ ಬೆಡ್ರೂಮ್ ಅಲಂಕಾರ
ರಕ್ತದ ಗುರುತುಗಳು
ಹೆಣಗಳನ್ನು ಮಾತನಾಡಿಸುವ
ಅಕ್ಷರಗಳ ಚಮತ್ಕಾರದಾಟ
ಒಂದರಕ್ಕಿಂತ ಒಂದು ಪೈಪೋಟಿ
ಅಂದಚಂದದ ಚಿತ್ರಗಳು
ಪುಟದ ಯಾವುದೋ ಮೂಲೆಯಲ್ಲಿ
ಕುತ್ತಿಗೆಗೆ ಹಗ್ಗ ಬಿಗಿದ ರೈತ
ವಿಷ ಕುಡಿದ ಬಡವ
ಅನ್ನವಿಲ್ಲದೆ ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ
ಇನ್ನುಳಿದವುಗಳಿಗೆ ಜಾಗೆ ಇಲ್ಲದ
ಈ ಪತ್ರಿಕೆಗಳು
ಹಳ್ಳಿಗಳಿಗೂ ತಪ್ಪದೇ ಬರುತ್ತವೆ
ಚಹ ಕುಡಿಯುವ ಮೊದಲು
ಪಾಪ! ಪತ್ರಿಕೆಗಳದಾದರೂ ಏನು ತಪ್ಪು?
ಜಾಗ ಉಳಿದರೆತಾನೇ
ಉಳಿದ ಸುದ್ಧಿಗಳನ್ನು ಹಾಕಲು.
ಉಳಿದ ಸುದ್ಧಿಗಳು ಹಾಗೇ ಉಳಿಯುತ್ತವೆ
ಏಕೆಂದರೆ,
ಪತ್ರಿಕೆಗಳು ಮಾರುಕಟ್ಟೆಯಲ್ಲಿ
ಮಾರಾಟವಾಗುತ್ತಿವೆ!
ಬಿಸಿಬಿಸಿ ಸುದ್ದಿಗಳ ಹೊತ್ತ ಪತ್ರಿಕೆಗಳು
ಮಾರಾಟವಾಗಿವೆ ಕಡ್ಲಿಪುರಿಯಂತೆ
ಸಂಪಾದಕರು ಮಾಲೀಕರ ಕನಿಸಿನಂತೆ
ಹಗಲೆಲ್ಲ ಚಿತ್ರಬಿಡಿಸಿದ
ಕೆಲ ಪತ್ರಕರ್ತರು ನಿನ್ನೆ ನಡುರಾತ್ರಿ
ಬಾರ್ ಕ್ಲಬ್ ಮತ್ತೇಲಿಂದಲೋ
ಮನೆಗಳಿಗೆ ಮರಳಿ,
ಮನೆಯಿಲ್ಲದವರು ಮತ್ತೆಲ್ಲಿಯೋ
ಪಾಪ! ಇನ್ನೂ ಹಾಸಿಗೆಯಲ್ಲಿಯೇ
ಕನವರಿಸುತ್ತಿರುವಾಗ
ಪತ್ರಿಕೆಗಳು ಮಾರಾಟವಾಗಿವೆ
ಮಾರಾಟವಾದ ಪೇಪರಗಳಲ್ಲಿ
ಅಧಿಕಾರಿಗಳ ಮುಗಳ್ನಗೆ, ಕುದರೆ ಸವಾರಿ
ಜನಪ್ರತಿನಿಧಿಗಳ ಅಮೃತಹಸ್ತದ
ಗುದ್ದಲಿ ಪೂಜೆ
ಮಂತ್ರಿಗಳ ಶಂಕುಸ್ಥಾಪನೆ ವಾಗ್ಭೂಷಣ
ಇದ್ದುಳ್ಳವರ ದಾನ ಧರ್ಮದ ಪುಣ್ಯದ ಕೆಲಸ
ಧರ್ಮ ದೇವರುಗಳ ಗುತ್ತಿಗೆದಾರರು
ಸಾಹಿತ್ಯ ಸಂಸ್ಕೃತಿಯ ಖರೀದಾರರು
ತಾರೆಯರ ಬೆಡ್ರೂಮ್ ಅಲಂಕಾರ
ರಕ್ತದ ಗುರುತುಗಳು
ಹೆಣಗಳನ್ನು ಮಾತನಾಡಿಸುವ
ಅಕ್ಷರಗಳ ಚಮತ್ಕಾರದಾಟ
ಒಂದರಕ್ಕಿಂತ ಒಂದು ಪೈಪೋಟಿ
ಅಂದಚಂದದ ಚಿತ್ರಗಳು
ಪುಟದ ಯಾವುದೋ ಮೂಲೆಯಲ್ಲಿ
ಕುತ್ತಿಗೆಗೆ ಹಗ್ಗ ಬಿಗಿದ ರೈತ
ವಿಷ ಕುಡಿದ ಬಡವ
ಅನ್ನವಿಲ್ಲದೆ ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ
ಇನ್ನುಳಿದವುಗಳಿಗೆ ಜಾಗೆ ಇಲ್ಲದ
ಈ ಪತ್ರಿಕೆಗಳು
ಹಳ್ಳಿಗಳಿಗೂ ತಪ್ಪದೇ ಬರುತ್ತವೆ
ಚಹ ಕುಡಿಯುವ ಮೊದಲು
ಪಾಪ! ಪತ್ರಿಕೆಗಳದಾದರೂ ಏನು ತಪ್ಪು?
ಜಾಗ ಉಳಿದರೆತಾನೇ
ಉಳಿದ ಸುದ್ಧಿಗಳನ್ನು ಹಾಕಲು.
ಉಳಿದ ಸುದ್ಧಿಗಳು ಹಾಗೇ ಉಳಿಯುತ್ತವೆ
ಏಕೆಂದರೆ,
ಪತ್ರಿಕೆಗಳು ಮಾರುಕಟ್ಟೆಯಲ್ಲಿ
ಮಾರಾಟವಾಗುತ್ತಿವೆ!
ರೊಟ್ಟಿ

ಒಂದು ಕಾಲು ಇತ್ತು:
ಕಾರಜ್ವಾಳ -ಬಿಳಿಜ್ವಾಳ ಭಯಂಕರ ಸುಗ್ಗಿ
ಬೆಳ್ಳಿಚುಕ್ಕಿ ಮೂಡಿ ಬೆಳಕ ಹರಿಯೊದ್ರೊಳಗ
ಕಲ್ಲಿನ ನಾದನ್ಯಾಗ ಹಾಡಿನ ಸೊಲ್ಲ ಬೆರಸಿ
ಸಿಗಾರೇರಿ ಬೀಸಿದ ಹಿಟ್ಟನಾದಿ, ರುಬ್ಬಿ
ರೊಟ್ಟಿ ಮಾಡ್ತಿದ್ದರು ನಮ್ಮವ್ವ,
ಚಿಗವ್ವ ಎಲ್ಲರೂ ಒಲಿಮ್ಯಾಲ.
ಹಸಿಬಿಸಿ ಶೆಗಣಿ ಕುಳ್ಳ
ಹಾದಿಬೀದಿ ಮ್ಯಾಲಿನ ಕಳ್ಳಿಕಟ್ಟಿಗಿ
ಕರಿ ನೆಲದಾಗ ಕಿತ್ತಿಬಿದ್ದ ಖ್ವಾಡವಿ ಆರಸಿ
ಬಾಜು ಮನ್ಯಾಗಿನ ಬೆಂಕಿಲೆ ಒಲಿ ಹೊತ್ತಿಸಿ
ಬಡದ ರೊಟ್ಟಿ ಮಾಡ್ತಿದ್ದರು,
ಇಡೀ ಓಣಿಗೇ ಕೇಳುಹಾಂಗ.
ಅಡುಗಿ ಮನ್ಯಾಗ
ಮೈಮುರ್ಕೊಂಡ ಬಿದ್ದ ಕತ್ಲ್ಯಾಗ
ಉಸರಗಟ್ಟಿ ಸಾಯೋ ಹೊಗಿಯೊಳಗs
ಒಲ್ಯಾಗ ಮಾರಿಹಾಕಿ
ಊದಿ ಉರಿ ಮಾಡಿ
ರೊಟ್ಟಿ ಬೇಸತ್ತಿದ್ದಳು ನಮ್ಮವ್ವ
ತವ್ಯಾಗ ಉಬ್ಬಿದ ರೊಟ್ಟಿ ನೋಡಿ ನಾವೂs
ಕುಣದ ಕುಪ್ಪಳಿಸಿ
ಹಸದ ಹಲ್ಲಕಿಸದ
ಅವ್ವಕೊಟ್ಟ ಅದs ಬಿಸಿರೊಟ್ಟಿ
ಕೈಸುಟ್ಕೊಂತ ಅಂಗಳದಾಗ
ಹಾಸಿದ ಬೆಳದಿಂಗಳನ್ಯಾಗ
ಹಾಡ್ಯಾಡಿ ತಿಂದ
ಅಲ್ಲೇ ನಿದ್ದಿ ಹೋಗತಿದ್ವಿ.
ಮಾರ್ಡನ್ ಹಾಡ ಹಾಡ್ಕೊಂತs
ಈಗ ನನ್ನ ಹೆಂಡ್ತಿನೂs
ರೊಟ್ಟಿ ಮಾಡ್ತಾಳ
ಕಿಚನ ರೂಮನ್ಯಾಗ ನಿಂತ-
ನಡಮಟ ಕಟ್ಟಿದ ಕಟ್ಟಿಮ್ಯಾಲ
ಗ್ಯಾಸ ಸಿಲೆಂಡರ ಒಲಿಹೊತ್ತಿಸಿ
ಹಾಂ ಅನ್ನೊದಕs ರೊಟ್ಟಿರೆಡಿ!
ಆದರ,
ನಮ್ಮವ್ವನ ರೊಟ್ಟಿಹಾಂಗ ಹೆಂಡ್ತಿ ರೊಟ್ಟಿ
ತವ್ಯಾಗ ಉಬ್ಬಿ ನಿಲ್ಲಾಂಗಿಲ್ಲ
ಎತ್ತಿಹಿಡದರ ಕೈಯಾಗೂs ನಿಲ್ಲಾಂಗಿಲ್ಲ.
ಹಿಂಗ್ಯಾಕs ನಿನ್ನ ರೊಟ್ಟಿ?
ಅಂತ ಹೆಂಡ್ತಿನ ಕೇಳಿದರ:
ಅವಹಂಗ!
ಹೈಬ್ರಿಡಜ್ವಾಳ ರೊಟ್ಟಿ ಅಂತಾಳ!!
ಬುಧವಾರ, ಫೆಬ್ರವರಿ 25, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)